ಸುಡಾನ್ ನಲ್ಲಿ ಅಪಾಯದ ಮಟ್ಟ ತಲುಪಿದ ಬರಗಾಲ ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳವಳ
ವಿಶ್ವಸಂಸ್ಥೆ: ಸುಡಾನ್ ನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆಯೇ ಕ್ಷಾಮ ಪರಿಸ್ಥಿತಿ ಅಪಾಯದ ಮಟ್ಟವನ್ನು ತಲುಪುತ್ತಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳವಳ ವ್ಯಕ್ತಪಡಿಸಿದೆ.
ಸುಡಾನ್ ನಲ್ಲಿ ಮಾನವ ಸಂಕಟವು ವಿನಾಶಕಾರಿ ಹಂತವನ್ನು ತಲುಪಿದೆ. 11.5 ದಶಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು 3.2 ದಶಲಕ್ಷ ಜನರು ನೆರೆಯ ರಾಷ್ಟ್ರಗಳಲ್ಲಿ ಆಶ್ರಯ ಬಯಸಿದ್ದಾರೆ. ಸುಡಾನ್ ನಲ್ಲಿ ಉಲ್ಬಣಗೊಳ್ಳುತ್ತಿರುವ ವಿಪತ್ತನ್ನು `ದಿಗ್ಭ್ರಮೆಗೊಳಿಸುವ ಅನುಪಾತದ ಮಾನವೀಯ ಬಿಕ್ಕಟ್ಟು' ಎಂದು ವಿಶ್ಲೇಷಿಸಬಹುದು ಎಂದು ಭದ್ರತಾ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆ ನೆರವು ಸಮನ್ವಯ ಏಜೆನ್ಸಿಯ (ಒಸಿಎಚ್‍ಎ) ವಕಾಲತ್ತು ಮತ್ತು ಕಾರ್ಯಾಚರಣೆ ವಿಭಾಗದ ನಿರ್ದೇಶಕಿ ಎಡೆಮ್ ವೊಸೊರ್ನು ಹೇಳಿದ್ದಾರೆ.
ನಿರಂತರ ಸಂಘರ್ಷದಿಂದಾಗಿ ವೇಗ ಪಡೆದಿರುವ ಈ ಮಾನವ ನಿರ್ಮಿತ ದುರಂತವು ಆಹಾರ ವ್ಯವಸ್ಥೆ ಮತ್ತು ನಿರ್ಣಾಯಕ ಮೂಲಸೌಕರ್ಯ ವ್ಯವಸ್ಥೆಯನ್ನು ಹಳಿತಪ್ಪಿಸಿದ್ದು ಕೋಟ್ಯಾಂತರ ಜನರನ್ನು ಸನ್ನಿಹಿತ ಅಪಾಯದ ದವಡೆಗೆ ನೂಕಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಕ್ಷಾಮದ ಪರಿಸ್ಥಿತಿ ಈಗ ಐದು ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ. ತೀವ್ರಗೊಂಡಿರುವ ಸಂಘರ್ಷದ ಹಿನ್ನೆಲೆಯಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರು ನೆಲೆಸಿರುವ ಝಮ್ ಝಾಮ್, ಅಲ್-ಸಲಾಮ್, ಅಬು ಶೌಕ್ ಶಿಬಿರಗಳು ಹಾಗೂ ಪಶ್ಚಿಮದ ನುಬಾ ಪರ್ವತ ಪ್ರದೇಶಗಳಲ್ಲಿ ಕ್ಷಾಮ ವ್ಯಾಪಿಸುತ್ತಿದೆ ಎಂದವರು ಹೇಳಿದ್ದಾರೆ.
ಸಂಘರ್ಷ ಮತ್ತು ಸ್ಥಳಾಂತರಗೊಳ್ಳುವಿಕೆ ಆಹಾರ ಅಭದ್ರತೆ ಸಮಸ್ಯೆಯ ಮೂಲ ಕಾರಣವಾಗಿದ್ದು ನೆರವು ಪೂರೈಕೆ ಹಾಗೂ ನೆರವು ಕಾರ್ಯಕರ್ತರ ಪ್ರವೇಶವನ್ನು ನಿರ್ಬಂಧಿಸಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದೆ. ಯಾವುದೇ ಕ್ಷಾಮವನ್ನು ಗುರುತಿಸುವ ಮೊದಲೇ ಸಾವಿರಾರು ಸಾವುಗಳು ಸಂಭವಿಸಿರುತ್ತವೆ ಎಂಬುದನ್ನು ಈ ತೀವ್ರ ಬಿಕ್ಕಟ್ಟಿನಿಂದ ನಮಗೆ ಅರಿವಾಗುತ್ತದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‍ಎಒ)ಯ ಉಪ ಪ್ರಧಾನ ಕಾರ್ಯದರ್ಶಿ ಬೆಥ್ ಬೆಚ್ಡೋಲ್ ಹೇಳಿದ್ದಾರೆ.
ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಷನ್(ಐಪಿಸಿ)ನ ಇತ್ತೀಚಿನ ವಿಶ್ಲೇಷಣೆಯು ಆಹಾರ ಅಭದ್ರತೆಯಿಂದಾಗಿ ದುರ್ಬಲ ಗುಂಪಿನ ಮೇಲೆ, ಮುಖ್ಯವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಅಸಮಾನ ಪರಿಣಾಮವನ್ನು ಒತ್ತಿಹೇಳಿದೆ. ಆಹಾರ ಉತ್ಪಾದನೆಗೆ ಅಡ್ಡಿ, ಅಡಚಣೆ ಮತ್ತು ಕುಸಿದ ಮಾರುಕಟ್ಟೆ ಪರಿಸ್ಥಿತಿಯು ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. 2025ರ ಮಧ್ಯಭಾಗದ ವೇಳೆಗೆ ಕ್ಷಾಮವು ಸುಡಾನ್ ನ ಉಮ್ ಕದಾದಹ್ ಮತ್ತು ಎಲ್ ಫಶರ್ ಪ್ರದೇಶ ಸೇರಿದಂತೆ ಐದು ಹೆಚ್ಚುವರಿ ಪ್ರಾಂತಕ್ಕೆ ವ್ಯಾಪಿಸಲಿದೆ. ತಕ್ಷಣ ಮಧ್ಯಪ್ರವೇಶಿಸದಿದ್ದರೆ ಇತರ 17 ಪ್ರದೇಶಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ . ಪೀಡಿತ ವಲಯಗಳಲ್ಲಿ 16% ಕುಟುಂಬಗಳು ಪ್ರಸ್ತುತ ಭೀಕರ ಆಹಾರ ಅಭದ್ರತೆಯ ವ್ಯಾಪ್ತಿಯಲ್ಲಿರುವುದನ್ನು ಇತ್ತೀಚಿನ ವಿಶ್ಲೇಷಣೆ ತೋರಿಸಿದೆ. ನಿರಂತರ ಪ್ರಯತ್ನಗಳ ಹೊರತಾಗಿಯೂ ಮಾನವೀಯ ನೆರವಿನ ಸಾಗಣೆ ಮತ್ತು ಪೂರೈಕೆಗೆ ಅಡೆತಡೆ ಹೆಚ್ಚಿದೆ ಎಂದು ಐಪಿಸಿ ಸಮಿತಿ ಹೇಳಿದೆ.
ಡಿಸೆಂಬರ್ 25ರಂದು ಆಹಾರ, ಪೌಷ್ಟಿಕ ವಸ್ತುಗಳು ಹಾಗೂ ಇತರ ಅಗತ್ಯದ ನೆರವು ಹೊತ್ತ 28 ಟ್ರಕ್ ಗಳು ಸುಡಾನ್ ಬಂದರಿನಿಂದ ಖಾರ್ಟೌಮ್ ತಲುಪಿರುವುದು ಒಂದು ಹೆಜ್ಜೆ ಮುಂದೆ ಸಾಗಿರುವುದನ್ನು ಸೂಚಿಸಿದೆ. ಆದರೂ ಸವಾಲುಗಳು ಉಳಿದಿವೆ . ದಕ್ಷಿಣ ಕೊರ್ಡೊಫಾನ್‍ನ ಪ್ರಮುಖ ಪ್ರದೇಶಗಳಿಗೆ ಬಾಹ್ಯ ನೆರವು ಪೂರೈಕೆ ಕಡಿತಗೊಂಡಿದೆ. ಮಾನವೀಯ ನೆರವು ಒದಗಿಸುವ ಸಿಬ್ಬಂದಿಗಳಿಗೆ ವೀಸಾ ಒದಗಿಸುವಲ್ಲಿಯೂ ವಿಳಂಬವಾಗುತ್ತಿದೆ. ದರ್ಫುರ್ ನಲ್ಲಿರುವ ಅಡ್ರೆ ಗಡಿದಾಟುವಿನಲ್ಲಿ ಹೊಸದಾಗಿ ಆರಂಭಿಸಲಾದ ಪರಿಶೀಲನಾ ವ್ಯವಸ್ಥೆಯೂ ನೆರವು ಪೂರೈಕೆಯನ್ನು ವಿಳಂಬಿಸುತ್ತಿದೆ ಎಂದು ಎಡೆಮ್ ವೊಸೊರ್ನು ಹೇಳಿದ್ದಾರೆ.
ಸ್ಥಳಾಂತರಗೊಂಡ ಕುಟುಂಬಗಳಲ್ಲಿ 90%ದಷ್ಟು ಕುಟುಂಬಗಳು ಪ್ರಸ್ತುತ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಬೇಕು. ಆರ್ಥಿಕ ದೇಣಿಗೆಯನ್ನು ಹೆಚ್ಚಿಸಲು, ಪರಿಹಾರ ಕಾರ್ಯಾಚರಣೆಗೆ ಸುರಕ್ಷಿತ ಪರಿಸ್ಥಿತಿ ನಿರ್ಮಿಸಲು ಹಾಗೂ ಸಂಘರ್ಷದಲ್ಲಿ ನಿರತರಾಗಿರುವ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವಿನ ವೈರತ್ವವನ್ನು ಕೊನೆಗೊಳಿಸಲು ಅಂತರಾಷ್ಟ್ರೀಯ ಸಮುದಾಯ ಆದ್ಯತೆ ನೀಡಬೇಕು ಎಂದು ಐಪಿಸಿ ಆಗ್ರಹಿಸಿದೆ.
► ಬಹು- ವಲಯ ಮಾನವೀಯ ನೆರವು
2025ರ ಸುಡಾನ್ ಮಾನವೀಯ ಅಗತ್ಯಗಳು ಮತ್ತು ಪ್ರತಿಕ್ರಿಯೆ ಯೋಜನೆಯ ಪ್ರಕಾರ `ನೆರವಿನ ತುರ್ತು ಅಗತ್ಯವಿರುವ 21 ದಶಲಕ್ಷ ಜನರಿಗೆ ನೆರವು ಒದಗಿಸಲು 4.2 ಶತಕೋಟಿ ಡಾಲರ್ ಮೊತ್ತದ ಅಗತ್ಯವಿದೆ. ಜತೆಗೆ, ನೆರೆದೇಶಗಳಿಗೆ ಸ್ಥಳಾಂತರಗೊಂಡ ಸುಡಾನ್ ನಿವಾಸಿಗಳಿಗೆ ನೆರವು ತಲುಪಿಸಲು ಹೆಚ್ಚುವರಿ 1.8 ಶತಕೋಟಿ ಡಾಲರ್ ನಿಧಿಯ ಅಗತ್ಯವಿದೆ'.
ಕೃಷಿಗೆ ಎದುರಾಗಿರುವ ಅಡೆತಡೆಗಳನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ಎಫ್‍ಎಒ ಒತ್ತಿಹೇಳಿದ್ದು, ರೈತರು ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರೆ ಅವರು ಆಹಾರವನ್ನು ಉತ್ಪಾದಿಸುತ್ತಾರೆ. ಆಹಾರ ಕೊರತೆ, ಆಹಾರ ಅಭದ್ರತೆ ಸಮಸ್ಯೆ ನಿವಾರಣೆಯಲ್ಲಿ ಇದು ಬಹುಮುಖ್ಯ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.