ಭಯಾನಕ ವಿಪತ್ತಿನ ಅಂಚಿನಲ್ಲಿ ಸುಡಾನ್: ವಿಶ್ವಸಂಸ್ಥೆ ಎಚ್ಚರಿಕೆ

Update: 2025-02-17 21:09 IST
SUDAN

PC ; un.org/en/

  • whatsapp icon

ಜಿನೆವಾ: ನಮ್ಮ ಕಾಲದ ಅತ್ಯಂತ ವಿನಾಶಕ ಬಿಕ್ಕಟ್ಟುಗಳಲ್ಲಿ ಒಂದಾಗಿರುವ ಸುಡಾನ್‌ ನ ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಈ ವರ್ಷ 6 ಶತಕೋಟಿ ಡಾಲರ್ ಮೊತ್ತವನ್ನು ಅಂದಾಜಿಸಲಾಗಿದ್ದು ಅಂತರರಾಷ್ಟ್ರೀಯ ದೇಣಿಗೆದಾರರು ನೆರವು ನೀಡಬೇಕು ಎಂದು ವಿಶ್ವಸಂಸ್ಥೆ ಸೋಮವಾರ ವಿನಂತಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಇದು 40% ಅಧಿಕವಾಗಿದೆ. ಸುಡಾನ್‌ ನ ಸೇನಾಪಡೆ ಮತ್ತು ಅರೆ ಸೇನಾಪಡೆ (ರ್ಯಾಪಿಡ್ ಸಪೋರ್ಟ್ ಫೋರ್ಸ್) ನಡುವೆ ಕಳೆದ 22 ತಿಂಗಳಿಂದ ಮುಂದುವರಿದಿರುವ ಯುದ್ಧ, ಸಾಮೂಹಿಕ ಸ್ಥಳಾಂತರ, ಮತ್ತು ಭೀಕರ ಬರಗಾಲದಿಂದಾಗಿ ಇಷ್ಟು ಮೊತ್ತದ ದೇಣಿಗೆ ಅಗತ್ಯವಿದೆ. ಸುಡಾನ್‌ ನಲ್ಲಿನ ಯುದ್ಧದಿಂದ ಸುಮಾರು 12 ದಶಲಕ್ಷ ಜನತೆ ನೆಲೆ ಕಳೆದುಕೊಂಡಿದ್ದು ಇವರಲ್ಲಿ ಸುಮಾರು 3.5 ದಶಲಕ್ಷ ಮಂದಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಆದರೆ ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ನೆರವು ಸಂಸ್ಥೆಗಳಿಗೆ ಅಮೆರಿಕದ ದೇಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಘೋಷಿಸಿರುವುದು ವಿಶ್ವದಾದ್ಯಂತ ಜೀವರಕ್ಷಕ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಿದೆ.

ಸುಡಾನ್‌ ನಲ್ಲಿ ನಡೆಯುತ್ತಿರುವ ಯುದ್ಧದಿಂದ ಈಗಾಗಲೇ ದೇಶದ 20%ದಷ್ಟು ಜನಸಮುದಾಯ ನೆಲೆ ಕಳೆದುಕೊಂಡಿದೆ ಮತ್ತು 50%ದಷ್ಟು ಜನಸಂಖ್ಯೆಗೆ ಆಹಾರದ ಕೊರತೆ ಎದುರಾಗಿದೆ.

ಸುಡಾನ್ ಮಾನವೀಯ ತುರ್ತುಪರಿಸ್ಥಿಯ ಸಂಕಷ್ಟದಲ್ಲಿದೆ. ಕ್ಷಾಮ ತೀವ್ರಗೊಳ್ಳುತ್ತಿದೆ. ಲೈಂಗಿಕ ಹಿಂಸಾಚಾರ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳ ಸಾವು-ನೋವಿನ ಪ್ರಮಾಣ ಏರುತ್ತಿದೆ. ಯಾತನೆ ಭಯಾನಕವಾಗಿದೆ. ಸುಡಾನ್‌ ನ ಮೂರನೇ ಎರಡರಷ್ಟು ಜನಸಂಖ್ಯೆಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ತುರ್ತು ಪರಿಹಾರ ಕಾರ್ಯಾಚರಣೆಯ ಸಂಯೋಜಕ ಟಾಮ್ ಫ್ಲೆಚರ್ ಹೇಳಿದ್ದಾರೆ.

ಡಾರ್ಫರ್ ನ ಸ್ಥಳಾಂತರ ಶಿಬಿರಗಳು ಸೇರಿದಂತೆ ಸುಡಾನ್‌ ನ ಕನಿಷ್ಠ 5 ಪ್ರದೇಶಗಳಲ್ಲಿ ಕ್ಷಾಮ ವರದಿಯಾಗಿದೆ. ಯುದ್ಧದ ಮುಂದುವರಿಕೆ ಮತ್ತು ಮೂಲಸೌಕರ್ಯ ಸೇವೆ ಕುಸಿದಿರುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಡುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸ್ಥಳಾಂತರಗೊಂಡವರಿಗಾಗಿ ಡಾರ್ಫರ್ ನಲ್ಲಿ ನಿರ್ಮಿಸಿರುವ, ಬರಗಾಲದಿಂದ ತತ್ತರಿಸಿರುವ ಶಿಬಿರಗಳ ಮೇಲೆ ಕಳೆದ ವಾರ ಅರೆ ಸೇನಾಪಡೆ ದಾಳಿ ನಡೆಸಿತ್ತು.

ವಿಶ್ವಸಂಸ್ಥೆಯ ಯೋಜನೆಗಳು ದೇಶದೊಳಗಿನ ಸುಮಾರು 21 ದಶಲಕ್ಷ ಜನರನ್ನು ತಲುಪುವ ಗುರಿ ಹೊಂದಿದ್ದು ಇದು 2025ಕ್ಕೆ ಸಂಬಂಧಿಸಿ ಇದುವರೆಗಿನ ಅತ್ಯಂತ ಮಹಾತ್ವಾಕಾಂಕ್ಷೆಯ ಮಾನವೀಯ ಪ್ರತಿಕ್ರಿಯೆಯಾಗಿದೆ. ಇದಕ್ಕೆ 4.2 ಶತಕೋಟಿ ಡಾಲರ್ ಮೊತ್ತ ನಿಗದಿಗೊಳಿಸಿದ್ದು , ಉಳಿದ 1.8 ಶತಕೋಟಿ ಡಾಲರ್ ಮೊತ್ತವನ್ನು ಸಂಘರ್ಷದಿಂದ ನೆಲೆ ಕಳೆದುಕೊಂಡ 4.8 ದಶಲಕ್ಷ ಜನರಿಗೆ ಮತ್ತು ಸುಡಾನ್‍ನಿಂದ ಪಲಾಯನ ಮಾಡಿರುವ ಜನರಿಗೆ ಆಶ್ರಯ ಕಲ್ಪಿಸಿರುವ ಮಧ್ಯ ಆಫ್ರಿಕಾ ಗಣರಾಜ್ಯದ ದೇಶಗಳಿಗೆ ನಿಗದಿಗೊಳಿಸಲಾಗಿದೆ. ಈ ವರ್ಷ ಸುಮಾರು 26 ದಶಲಕ್ಷ ಜನರಿಗೆ ನೆರವು ಕಲ್ಪಿಸುವ ಉದ್ದೇಶವಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಏಜೆನ್ಸಿ ಒಸಿಎಚ್‍ಎ ಹೇಳಿದೆ.

► ಪ್ರಾಥಮಿಕ ಶಿಕ್ಷಣ ವಂಚಿತ ಮಕ್ಕಳು

ಯುದ್ಧ, ಕ್ಷಾಮದಿಂದ ಜರ್ಝರಿತಗೊಂಡಿರುವ ಸುಡಾನ್‌ ನಲ್ಲಿ ಪ್ರಾಥಮಿಕ ಶಿಕ್ಷಣದಿಂದ ವಂಚಿತಗೊಳ್ಳುವ ಮಕ್ಕಳ ಪ್ರಮಾಣವೂ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ತುರ್ತು ನೆರವು ಲಭಿಸದಿದ್ದರೆ ಮೂರನೇ ಎರಡರಷ್ಟು ನಿರಾಶ್ರಿತರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶಾವಕಾಶ ನಿರಾಕರಣೆಯಾಗಲಿದ್ದು ಇದು ಇಡೀ ಪೀಳಿಗೆಗೆ ಬೆದರಿಕೆಯಾಗಿದೆ ಎಂದು ಯುಎನ್‍ಎಚ್‍ಸಿಆರ್(ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್) ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News