ದಕ್ಷಿಣ ಸುಡಾನ್‍ನ ಪ್ರಮುಖ ನಗರ ಅರೆಸೇನಾ ಪಡೆ ವಶಕ್ಕೆ: ವರದಿ

Update: 2024-06-30 23:35 IST
ದಕ್ಷಿಣ ಸುಡಾನ್‍ನ ಪ್ರಮುಖ ನಗರ ಅರೆಸೇನಾ ಪಡೆ ವಶಕ್ಕೆ: ವರದಿ

Photo: ANI/Twitter

  • whatsapp icon

ಪೋರ್ಟ್ ಸುಡಾನ್ : ಸುಡಾನ್‍ನ ಸಶಸ್ತ್ರ ಪಡೆಗಳೊಂದಿಗೆ ಕಳೆದ ಒಂದು ವರ್ಷದಿಂದಲೂ ಸಂಘರ್ಷ ಮುಂದುವರಿಸಿರುವ ಅರೆಸೇನಾ ಪಡೆ ಆಗ್ನೇಯ ರಾಜ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದು ಸಾವಿರಾರು ಜನರು ನಗರದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.

ಸೆನ್ನಾರ್ ರಾಜ್ಯದ ರಾಜಧಾನಿ ಸಿಂಗಾ ನಗರವನ್ನು ನಮ್ಮ ತುಕಡಿಗಳು ವಶಕ್ಕೆ ಪಡೆದಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ನಮ್ಮ ಯೋಧರನ್ನು ನಿಯೋಜಿಸಲಾಗಿದೆ ಎಂದು ಅರೆಸೇನಾ ಪಡೆ ` ರ‍್ಯಾಪಿಡ್ ಸಪೋರ್ಟ್ ಫೋರ್ಸಸ್(ಆರ್‍ಎಸ್‍ಎಸ್) ಘೋಷಿಸಿದೆ. ಪ್ರಮುಖ ರಸ್ತೆಗಳಲ್ಲಿ ಹೋರಾಟ ಮುಂದುವರಿದಿದ್ದು ಸಶಸ್ತ್ರ ಪಡೆಯ ಯುದ್ಧವಿಮಾನಗಳು ನಗರದ ಮೇಲೆ ಹಾರಾಟ ನಡೆಸುತ್ತಿವೆ. ಆತಂಕಗೊಂಡಿರುವ ನಿವಾಸಿಗಳು ಮನೆಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸೇನಾ ಮುಖ್ಯಸ್ಥ ಅಬ್ದುಲ್ ಫತಾಹ್ ಅಲ್‍ಬುರ್ಹನ್‍ಗೆ ನಿಷ್ಠರಾಗಿರುವ ಸಶಸ್ತ್ರ ಪಡೆ ಹಾಗೂ ಮಾಜಿ ಉಪಮುಖ್ಯಸ್ಥ ಮುಹಮ್ಮದ್ ಹಮ್ದನ್ ಡಗಾಲೊಗೆ ನಿಷ್ಠವಾಗಿರುವ ಅರೆಸೇನಾ ಪಡೆಯ ನಡುವೆ 2023ರ ಎಪ್ರಿಲ್‍ನಿಂದ ಸಂಘರ್ಷ ಭುಗಿಲೆದ್ದಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ನೆಲೆ ಕಳೆದುಕೊಳ್ಳುವಂತಾಗಿದೆ. ಅರೆಸೇನಾ ಪಡೆಯು ಸುಡಾನ್ ರಾಜಧಾನಿ ಖಾರ್ಟಮ್‍ನ ಬಹುತೇಕ ಭಾಗ, ದೇಶದ ಮಧ್ಯಭಾಗದಲ್ಲಿರುವ ಅಲ್-ಜಜಿರಾ ರಾಜ್ಯ, ಪಶ್ಚಿಮದ ವಿಶಾಲ ದರ್ಫುರ್ ಪ್ರಾಂತ ಹಾಗೂ ದಕ್ಷಿಣದ ಕೊರ್ಡೊಫಾನ್ ಪ್ರಾಂತದ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News