ಝೀಲಂ ನದಿಯಿಂದ ದಿಢೀರ್ ನೀರು ಬಿಡುಗಡೆ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆತಂಕ

PC: PTI
ಇಸ್ಲಾಮಾಬಾದ್: ಝೀಲಂ ನದಿ ನೀರಿನ ಮಟ್ಟ ದಿಢೀರನೇ ಹೆಚ್ಚಿರುವುದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅಲ್ಲೋಲ- ಕಲ್ಲೋಲ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಉರಿ ಅಣೆಕಟ್ಟಿನಿಂದ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ದಿಢೀರನೇ ನೀರು ಬಿಟ್ಟಿರುವುದು ಈ ಗೊಂದಲಕ್ಕೆ ಕಾರಣ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ದಿಢೀರನೇ ನೀರು ಬಿಟ್ಟಿರುವುದು ಪಾಕ್ ಆಕ್ರಮಿತ ಕಾಶ್ಮೀರದ ಹಟ್ಟಿಯಾನ್ ಬಾಲಾ ಜಿಲ್ಲೆಯಲ್ಲಿ ಜಲ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ನದಿ ದಂಡೆಯ ನಿವಾಸಿಗಳು ಮನೆ ಮಠಗಳನ್ನು ತೊರೆದು ಅನಿವಾರ್ಯವಾಗಿ ಸುರಕ್ಷಿತ ತಾಣಗಳತ್ತ ಪ್ರಯಾಣ ಬೆಳೆಸಿದ್ದಾರೆ.
ಈ ನಡೆಯು ಅಣ್ವಸ್ತ್ರ ಸಜ್ಜಿತ ನೆರೆ ದೇಶಗಳಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದು, ಇದು ಅಂತಾರಾಷ್ಟ್ರೀಯ ನಿಯಮಗಳು ಮತ್ತು ಸಿಂಧೂ ಜಲ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಪಾಕಿಸ್ತಾನ ಆಪಾದಿಸಿದೆ. 26 ಮಂದಿ ಪ್ರವಾಸಿಗರ ಸಾವಿಗೆ ಕಾರಣವಾದ ಏಪ್ರಿಲ್ 23ರ ಪಹಲ್ಗಾಮ್ ದಾಳಿಯ ಬಳಿಕ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು.
ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರ್ ಬಾದ್ ಮತ್ತು ಛಕೋತಿ ಪ್ರದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಿ, ಕ್ಷಿಪ್ರವಾಗಿ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಸುರಕ್ಷಿತ ತಾಣಗಳಿಗೆ ತೆರಳಬೇಕು ಎಂದು ಸೂಚಿಸಲಾಗುತ್ತಿದೆ. "ನಮಗೆ ಯಾವುದೇ ಮುನ್ನೆಚ್ಚರಿಕೆ ಇರಲಿಲ್ಲ. ನೀರು ರಭಸವಾಗಿ ಹರಿದು ಬರುತ್ತಿದ್ದು, ಜೀವ ಮತ್ತು ಆಸ್ತಿಗಳನ್ನು ರಕ್ಷಿಸಲು ನಾವು ಹೆಣಗಾಡುತ್ತಿದ್ದೇವೆ" ಎಂದು ನದಿ ದಂಡೆಯ ಗ್ರಾಮವಾದ ದುಮೇಲ್ ನಿವಾಸಿ ಮುಹಮ್ಮದ್ ಆಸೀಫ್ ಹೇಳಿದ್ದಾರೆ. ಝೀಲಂ ನದಿಗೆ ಸನಿಹವಾದ ಪ್ರದೇಶಗಳಲ್ಲಿ ವಾಸಿಸುವವರು ಸುರಕ್ಷಿತ ತಾಣಗಳಿಗೆ ತೆರಳುವಂತೆ ಮುಜಾಫರ್ ಬಾದ್ ಜಿಲ್ಲಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.