ತೈವಾನ್‍ಗೆ 2 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಅನುಮೋದನೆ
ವಾಷಿಂಗ್ಟನ್ : ಅತ್ಯಾಧುನಿಕ ಕ್ಷಿಪಣಿ, ರೇಡಾರ್ ವ್ಯವಸ್ಥೆ ಸೇರಿದಂತೆ ತೈವಾನ್‍ಗೆ 2 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟದ ಪ್ಯಾಕೇಜ್‍ಗೆ ಅಮೆರಿಕದ ವಿದೇಶಾಂಗ ಇಲಾಖೆ ಶುಕ್ರವಾರ ಅನುಮೋದನೆ ನೀಡಿದೆ.
ಸಂಸತ್‍ನ ಒಪ್ಪಿಗೆ ಪಡೆದಿರುವ ಮಾರಾಟ ಪ್ರಕ್ರಿಯೆಯಲ್ಲಿ 1.16 ಶತಕೋಟಿ ಡಾಲರ್ ಮೊತ್ತದ ಯುದ್ಧ ವಿಮಾನ ಹೊಡೆದುರುಳಿಸುವ ವ್ಯವಸ್ಥೆಗಳು, ಕ್ಷಿಪಣಿಗಳು, 828 ದಶಲಕ್ಷ ಡಾಲರ್ ಮೊತ್ತದ ರೇಡಾರ್ ವ್ಯವಸ್ಥೆಗಳು ಸೇರಿವೆ.
ಅಮೆರಿಕ ವಾಯುಪಡೆಯ ಸರಬರಾಜುಗಳಿಂದ ಇವನ್ನು ಪೂರೈಸಲಾಗುತ್ತದೆ. ತೈವಾನ್ ಅನ್ನು ರಾಜತಾಂತ್ರಿಕವಾಗಿ ಅಮೆರಿಕ ಅಧಿಕೃತವಾಗಿ ಮಾನ್ಯ ಮಾಡಿಲ್ಲವಾದರೂ ಅದು ತೈವಾನ್‍ನ ಪ್ರಮುಖ ಪಾಲುದಾರ ಮತ್ತು ಶಸ್ತ್ರಾಸ್ತ್ರಗಳ ಪ್ರಮುಖ ಪೂರೈಕೆದಾರನಾಗಿದೆ.
ಅಮೆರಿಕದ ಈ ನಡೆಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು ತೈವಾನ್‍ಗೆ ಶಸ್ತ್ರಾಸ್ತ್ರ ಪೂರೈಸದಂತೆ ಆಗ್ರಹಿಸಿದೆ. ಸೆಪ್ಟೆಂಬರ್ ನಲ್ಲಿ ತೈವಾನ್‍ಗೆ ಮಿಲಿಟರಿ ಉಪಕರಣಗಳ ಮಾರಾಟಕ್ಕೆ ಅನುಮೋದನೆ ನೀಡಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕದ ರಕ್ಷಣಾ ಸಾಮಾಗ್ರಿ ಉತ್ಪಾದಿಸುವ ಸಂಸ್ಥೆಗಳ ಮೇಲೆ ಚೀನಾ ನಿರ್ಬಂಧ ಜಾರಿಗೊಳಿಸಿತ್ತು.