ಸ್ವಯಂ ರಕ್ಷಣೆಗೆ ತೈವಾನ್ ದೃಢ ನಿರ್ಧಾರ ಮಾಡಬೇಕು: ಅಧ್ಯಕ್ಷ ಲಾಯ್ ಚಿಂಗ್-ಟೆ
ತೈಪೆ : ತೈವಾನ್ ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ದೃಢ ನಿರ್ಧಾರ ಮಾಡಬೇಕು ಎಂದು ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಹೇಳಿದ್ದಾರೆ.
ಹೊಸ ವರ್ಷದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಶಾಂತಿಯ ಸಮಯದಲ್ಲಿನ ಅಪಾಯಕ್ಕೆ ತೈವಾನ್ ಸಿದ್ಧವಾಗಿರಬೇಕು, ತನ್ನ ರಕ್ಷಣಾ ಬಜೆಟ್ ಹೆಚ್ಚಿಸುವುದನ್ನು ಮುಂದುವರಿಸಬೇಕು, ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಬೇಕು ಮತ್ತು ದೇಶವನ್ನು ರಕ್ಷಿಸುವ ತನ್ನ ನಿರ್ಣಯವನ್ನು ಪ್ರದರ್ಶಿಸಬೇಕು' ಎಂದರು. ತೈವಾನ್ ನ ಪ್ರಜಾಪ್ರಭುತ್ವ ಮತ್ತು ಭದ್ರತೆಯನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಮ್ಮ ಸಮಾಜದ ರಕ್ಷಣಾ ಸಾಮರ್ಥ್ಯವನ್ನು ಸದೃಢಗೊಳಿಸಲು, ದೊಡ್ಡ ಪ್ರಮಾಣದ ವಿಪತ್ತುಗಳಿಗೆ ಪ್ರತಿಕ್ರಿಯಿಸುವ ಮತ್ತು ಬೆದರಿಕೆಗಳು ಹಾಗೂ ಆಕ್ರಮಣವನ್ನು ತಡೆಯುವ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ನಮ್ಮ ಶಕ್ತಿಯ ಪ್ರತೀ ಕಣವನ್ನೂ ಬಳಸಬೇಕು ಎಂದು ಅವರು ಹೇಳಿದ್ದಾರೆ.
ಮೇ ತಿಂಗಳಲ್ಲಿ ಲಾಯ್ ಚಿಂಗ್-ಟೆ ಅಧಿಕಾರಕ್ಕೆ ಬಂದಂದಿನಿಂದ ಚೀನಾವು ತೈವಾನ್ ಮೇಲಿನ ಒತ್ತಡವನ್ನು ತೀವ್ರಗೊಳಿಸಿದ್ದು ತೈವಾನ್ ಜಲಸಂಧಿ ಹಾಗೂ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಮೂರು ಸುತ್ತಿನ ಮಿಲಿಟರಿ ಕವಾಯತುಗಳನ್ನು ನಡೆಸಿದೆ. ಮಂಗಳವಾರ ಹೊಸ ವರ್ಷದ ಸಂದೇಶ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ `ತೈವಾನ್ನೊಂದಿಗೆ ಚೀನಾದ ಪುನರ್ ಏಕೀಕರಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಘೋಷಿಸಿದ್ದರು.