ತೈವಾನ್‍ಗೆ ಶಿಕ್ಷೆ ವಿಧಿಸಲಾಗುವುದು ; ಚೀನಾ ಎಚ್ಚರಿಕೆ
ಬೀಜಿಂಗ್ : ತೈವಾನ್‍ನ ಸ್ವಾತಂತ್ರ್ಯದ ಕಡೆಗಿನ ಯಾವುದೇ ಕ್ರಮವನ್ನು ತೀವ್ರವಾಗಿ ಶಿಕ್ಷಿಸಲಾಗುವುದು ಎಂದು ಚೀನಾ ರವಿವಾರ ಎಚ್ಚರಿಕೆ ನೀಡಿದೆ.
ಚೀನಾ ವಿರೋಧಿ ನಿಲುವು ಹೊಂದಿರುವ ಲೈ ಚಿಂಗ್-ಟೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚೀನಾ, ಲೈ ಓರ್ವ ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಬಣ್ಣಿಸಿದೆ. `ತೈವಾನ್ ದ್ವೀಪದಲ್ಲಿನ ಯಾರಾದರೂ ಒಬ್ಬರು ತೈವಾನ್‍ನ ಸ್ವಾತಂತ್ರ್ಯದ ಕುರಿತು ಯೋಚಿಸಿದರೆ ಅವರು ಚೀನಾದ ಭೂಭಾಗವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ. ಅವರನ್ನು ಕಾನೂನಿನಡಿ ಕಠಿಣ ಕ್ರಮಕ್ಕೆ ಒಳಗಾಗಿಸಲಾಗುವುದು' ಎಂದು ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಎಚ್ಚರಿಕೆ ನೀಡಿದ್ದಾರೆ.
ಇದು ಅಂತಿಮ ಸತ್ಯವಾಗಿದೆ. ಚುನಾವಣಾ ಫಲಿತಾಂಶ ಏನೇ ಆಗಿರಲಿ, ಒಂದು ಚೀನಾ ಮಾತ್ರವೇ ಇರಲಿದೆ ಮತ್ತು ತೈವಾನ್ ಅದರ ಭಾಗವಾಗಿ ಇರಲಿದೆ ಎಂಬ ಮೂಲಭೂತ ವಿಷಯವನ್ನು ಅವರು ಬದಲಾಯಿಸಲು ಸಾಧ್ಯವಿಲ್ಲ. ತೈವಾನ್ ಯಾವತ್ತೂ ಒಂದು ದೇಶವಾಗಿರಲಿಲ್ಲ. ಭೂತಕಾಲದಲ್ಲೂ ಆಗಿರಲಿಲ್ಲ ಮತ್ತು ಭವಿಷ್ಯದಲ್ಲೂ ಸಾಧ್ಯವಿಲ್ಲ ಎಂದ ಅವರು ` ತೈವಾನ್ ನಿವಾಸಿಗಳ ಯೋಗಕ್ಷೇಮಕ್ಕೆ ಗಂಭೀರ ಬೆದರಿಕೆಯಾಗಿರುವ, ಚೀನಾ ದೇಶದ ಮೂಲಭೂತ ಹಿತಾಸಕ್ತಿಗೆ ಗಂಭೀರ ಹಾನಿ ಉಂಟುಮಾಡುವ ಮತ್ತು ತೈವಾನ್ ಜಲಸಂಧಿ ಮತ್ತು ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಪ್ರಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದ್ದಾರೆ.