ಸುಂಕ ಸಮಸ್ಯೆ: ವಿಯೆಟ್ನಾಂ, ಭಾರತ, ಇಸ್ರೇಲ್ ಜೊತೆ ಟ್ರಂಪ್ ವ್ಯಾಪಾರ ಮಾತುಕತೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಹೊಸ ಸುಂಕ ಜಾರಿಗೆ ಗಡುವು ಸಮೀಪಿಸುತ್ತಿರುವ ನಡುವೆಯೇ ವಿಯೇಟ್ನಾಂ, ಭಾರತ ಮತ್ತು ಇಸ್ರೇಲ್ ದೇಶಗಳ ಜತೆ ಅಮೆರಿಕ ವ್ಯಾಪಾರ ಮಾತುಕತೆ ಆರಂಭಿಸಿದೆ. ಟ್ರಂಪ್ ಸ್ವತಃ ಈ ದೇಶಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಉಭಯ ದೇಶಗಳು ಪರಸ್ಪರ ಒಪ್ಪಂದಕ್ಕೆ ಬರಲು ಸಾಧ್ಯವಾದಲ್ಲಿ ಸುಂಕವನ್ನು ಶೂನ್ಯಕ್ಕೆ ಕಡಿತಗೊಳಿಸುವ ಪ್ರಸ್ತಾವವನ್ನು ವಿಯೇಟ್ನಾಂನ ಕಮ್ಯುನಿಷ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ತೋ ಲಾಮ್ ಮುಂದಿಟ್ಟಿದ್ದಾರೆ ಎಂದು ಟ್ರಂಪ್, ಜಾಲತಾಣ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ.
ವಿಯೇಟ್ನಾಂ, ಭಾರತ ಮತ್ತು ಇಸ್ರೇಲ್ ದೇಶಗಳು ತ್ವರಿತಗತಿಯ ವ್ಯಾಪಾರ ಮಾತುಕತೆಗಳನ್ನು ಎದುರು ನೋಡುತ್ತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ವತಃ ಈ ದೇಶಗಳ ಜತೆ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿರಿಯ ಸಲಹೆಗಾರರ ಹೇಳಿಕೆಯನ್ನು ಸಿಎನ್ಎನ್ ವರದಿ ಉಲ್ಲೇಖಿಸಿದೆ.
ಈ ಮಾತುಕತೆಗಳು ಯಶಸ್ವಿಯಾದಲ್ಲಿ, ಪ್ರಸ್ತಾವಿತ ಹೊಸ ಸುಂಕದಿಂದ ತಪ್ಪಿಸಿಕೊಳ್ಳುವ ಸಂಭಾವ್ಯ ಮಾರ್ಗವನ್ನು ಟ್ರಂಪ್ ಮುಂದಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತ್ತೀಚಿನ ಎಕ್ಸಿಕ್ಯೂಟಿವ್ ಆದೇಶದಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಟ್ರಂಪ್ ಶೇಕಡ 25ರಷ್ಟು ಸುಂಕ ವಿಧಿಸಿದ್ದಾರೆ. ಇದಕ್ಕೂ ಮುನ್ನ ಶ್ವೇತಭವನದ ರೋಸ್ಗಾರ್ಡನ್ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮೇಲೆ ಶೇಕಡ 26ರಷ್ಟು ಸುಂಕ ವಿಧಿಸುವ ಪಟ್ಟಿಯನ್ನು ಪ್ರದರ್ಶಿಸಿದ್ದರು.