ಅಫ್ಘನ್ನರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನ: ಬೈಡನ್ ಘೋಷಣೆ

Update: 2023-09-22 18:19 GMT

Photo: PTI

ವಾಶಿಂಗ್ಟನ್, ಸೆ.22: ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಅಫ್ಘಾನ್ ವಲಸಿಗರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನ ನೀಡುವುದಾಗಿ ಬೈಡನ್ ಆಡಳಿತ ಗುರುವಾರ ಘೋಷಿಸಿದೆ.

2022ರ ಮಾರ್ಚ್ 15ರ ನಂತರ ಮತ್ತು 2023ರ ಸೆಪ್ಟಂಬರ್ 20ರ ಒಳಗೆ ಅಮೆರಿಕಕ್ಕೆ ಆಗಮಿಸಿರುವ ಸುಮಾರು 14,600 ಅಫ್ಘಾನ್ ನಿರಾಶ್ರಿತರಿಗೆ ‘ತಾತ್ಕಾಲಿಕ ಸಂರಕ್ಷಿತ ಸ್ಥಾನಮಾನ’ ನೀಡಲು ನಿರ್ಧರಿಸಲಾಗಿದೆ ಎಂದು ಆಂತರಿಕ ಭದ್ರತಾ ಸಚಿವಾಲಯ ಹೇಳಿದೆ. ಈ ವ್ಯವಸ್ಥೆ 2025ರವರೆಗೆ ಮಾನ್ಯವಾಗಿರುತ್ತದೆ. ಆ ಬಳಿಕ ಅದನ್ನು ನವೀಕರಿಸಬೇಕಾಗುತ್ತದೆ.

ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು ದೀರ್ಘಾವಧಿಯಲ್ಲಿ ನೆಲೆಸಲು ಅಥವಾ ಪೌರತ್ವ ಪಡೆಯುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಗಡಿಪಾರು ಮಾಡದಂತೆ ಅವರನ್ನು ರಕ್ಷಿಸುತ್ತದೆ ಮತ್ತು ದೇಶದಲ್ಲಿ ಕೆಲಸ ಮಾಡುವ ಅವಕಾಶ ಒದಗಿಸುತ್ತದೆ. 2021ರ ಆಗಸ್ಟ್ನಲ್ಲಿ ಅಮೆರಿಕವು ಕಾಬೂಲ್ನಿಂದ ಏರ್ಲಿಫ್ಟ್ ಮಾಡಿದ ಸಾವಿರಾರು ಅಫ್ಘನ್ನರಿಗೆ (ಈಗ ಅಮೆರಿಕದಲ್ಲಿ ವಿಶೇಷ ವಲಸೆ ವೀಸಾದಡಿ ನೆಲೆಸಿರುವ) ಈ ಕ್ರಮ ಯಾವುದೇ ಪರಿಣಾಮ ಬೀರುವುದಿಲ್ಲ.

‘ಈ ನಿರ್ಧಾರವು ತಾಲಿಬಾನ್ ಆಡಳಿತದಲ್ಲಿ ಹದಗೆಡುತ್ತಿರುವ ಅಫ್ಘಾನ್ ದೇಶದ ಪರಿಸ್ಥಿತಿಯನ್ನು ಗುರುತಿಸಿದ ಪ್ರಕ್ರಿಯೆಯಾ ಗಿದೆ’ ಎಂದು ನಿರಾಶ್ರಿತರು ಮತ್ತು ವಲಸಿಗರಿಗಾಗಿನ ಅಮೆರಿಕದ ಸಮಿತಿಯ ಮುಖ್ಯಸ್ಥ ಎಸ್ಕಿಂದರ್ ನೆಗಾಷ್ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News