ಥಾಯ್ಲೆಂಡ್ | ವಿರೋಧ ಪಕ್ಷ ವಿಸರ್ಜನೆಗೆ ನ್ಯಾಯಾಲಯ ಆದೇಶ
ಬ್ಯಾಂಕಾಕ್ : ಪ್ರಬಲ ರಾಜಪ್ರಭುತ್ವವನ್ನು ಟೀಕೆಗಳಿಂದ ರಕ್ಷಿಸುವ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಭಿಯಾನವನ್ನು ಆರಂಭಿಸಿರುವ ಥಾಯ್ಲೆಂಡ್ ನ ಪ್ರಮುಖ ವಿರೋಧ ಪಕ್ಷ `ಮೂವ್ ಫಾರ್ವರ್ಡ್' ಪಕ್ಷವನ್ನು ವಿಸರ್ಜಿಸುವಂತೆ ಸಾಂವಿಧಾನಿಕ ನ್ಯಾಯಾಲಯ ಬುಧವಾರ ಆದೇಶಿಸಿದೆ.
ರಾಜಪ್ರಭುತ್ವವನ್ನು ಟೀಕೆಯಿಂದ ರಕ್ಷಿಸುವ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂಬ ಅಭಿಯಾನ ಅಸಾಂವಿಧಾನಿಕವಾಗಿದ್ದು ದೊರೆ ಆಡಳಿತದ ಮುಖ್ಯಸ್ಥರಾಗಿರುವ ಥಾಯ್ಲೆಂಡ್ ನ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಪಾಯವಿದೆ. ಆದ್ದರಿಂದ ಈ ಅಭಿಯಾನವನ್ನು ಕೈಬಿಡುವಂತೆ 6 ತಿಂಗಳ ಹಿಂದೆ ಇದೇ ನ್ಯಾಯಾಲಯ ಸೂಚಿಸಿತ್ತು. ಆದರೆ ಮೂವ್ ಫಾರ್ವರ್ಡ್ ಪಕ್ಷ ಇದನ್ನು ತಿರಸ್ಕರಿಸಿತ್ತು. ಈ ತೀರ್ಪು ಪಕ್ಷದ ಸಂಸತ್ ಸದಸ್ಯರ ಸದಸ್ಯತ್ವದ ಮೇಲೆ ಪರಿಣಾಮ ಬೀರುವುದಿಲ್ಲ. ಸಂಸತ್ನಲ್ಲಿ ಮೂವ್ ಫಾರ್ವರ್ಡ್ ಪಕ್ಷ 143 ಸದಸ್ಯರನ್ನು ಹೊಂದಿದ್ದು ಅವರು ಇತರ ಪಕ್ಷದ ಜತೆ ಗುರುತಿಸಿಕೊಳ್ಳಬಹುದು. ಆದರೆ ಪಕ್ಷದ ಹಾಲಿ ಮತ್ತು ಮಾಜಿ ಕಾರ್ಯ ನಿರ್ವಾಹಕರನ್ನು 10 ವರ್ಷ ರಾಜಕೀಯದಿಂದ ನಿಷೇಧಿಸಲಾಗಿದೆ. ಈ ಮಧ್ಯೆ, ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ವಜಾಗೊಳಿಸಬೇಕೆಂದು ಕೋರಿ 40 ಮಾಜಿ ಸೆನೆಟರ್ಗಳು ಸಲ್ಲಿಸಿರುವ ಅರ್ಜಿಯನ್ನು ಸಾಂವಿಧಾನಿಕ ನ್ಯಾಯಾಲಯ ಮುಂದಿನ ವಾರ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.