ಥೈಲ್ಯಾಂಡ್ ಪ್ರವಾಹ ; ಮೃತರ ಸಂಖ್ಯೆ 12ಕ್ಕೆ ಏರಿಕೆ

Update: 2024-12-01 17:24 GMT

ಸಾಂದರ್ಭಿಕ ಚಿತ್ರ | PTI

ಬ್ಯಾಂಕಾಕ್ : ದಕ್ಷಿಣ ಥೈಲ್ಯಾಂಡ್‍ನಲ್ಲಿ ದಶಕದಲ್ಲೇ ಅತ್ಯಂತ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದ್ದು ಕಳೆದ 4 ದಿನಗಳಿಂದ ನೆರೆನೀರು ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಥೈಲ್ಯಾಂಡ್‍ನಲ್ಲಿ ಪ್ರವಾಹವು ಸುಮಾರು 6,40,000 ಮನೆಗಳ ಮೇಲೆ ಪರಿಣಾಮ ಬೀರಿದ್ದು ಕನಿಷ್ಠ 4 ಮಂದಿ ಸಾವನ್ನಪ್ಪಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು 200 ತಾತ್ಕಾಲಿಕ ಶಿಬಿರಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ನೆಲೆ ಕಲ್ಪಿಸಲಾಗಿದೆ ಎಂದು ವಿಪತ್ತು ತಡೆ ಮತ್ತು ನಿರ್ವಹಣೆ ಇಲಾಖೆ ಹೇಳಿದೆ.

ಕಳೆದ 50 ವರ್ಷಗಳಲ್ಲೇ ಭಾರೀ ಪ್ರವಾಹದಿಂದ ನಲುಗಿರುವ ಸೊಂಗ್‍ಖ್ಲ ಪ್ರಾಂತದಲ್ಲಿ 5 ಮಂದಿ , ಪಟ್ಟಾನಿ ನಗರದಲ್ಲಿ 3, ನರತಿವಾಟ್ ನಗರದಲ್ಲಿ ಇಬ್ಬರು ಮತ್ತು ಫಟ್ಟಾಲುಂಗ್ ಮತ್ತು ಯಾಲಾ ನಗರಗಳಲ್ಲಿ ತಲಾ ಒಬ್ಬ ಸಾವನ್ನಪ್ಪಿದ್ದಾನೆ.

ಚನಾ ಜಿಲ್ಲೆಯಲ್ಲಿ ಜಲಾವೃತಗೊಂಡಿರುವ ಮನೆಗಳ ಛಾವಣಿಯಲ್ಲಿ ಆಶ್ರಯ ಪಡೆದ ನಿವಾಸಿಗಳನ್ನು ಟ್ರಕ್‍ಗಳ ಮೂಲಕ ಸ್ಥಳಾಂತರಿಸಲಾಗಿದೆ. ಹಲವು ರಸ್ತೆಗಳು ನೀರಿನಲ್ಲಿ ಮುಳುಗಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ನೆರೆಯ ಮಲೇಶ್ಯಾದಲ್ಲಿ ಪ್ರವಾಹದಿಂದ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಕನಿಷ್ಠ 1,39,000 ಜನರನ್ನು ಸ್ಥಳಾಂತರಿಸಿರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News