ತೈವಾನ್ ಗೆ ಅಪ್ಪಳಿಸಿದ ಚಂಡಮಾರುತ | ಇಬ್ಬರು ಮೃತ್ಯು ; ಸರಕು ನೌಕೆ ಮುಳುಗಡೆ

Update: 2024-07-25 16:06 GMT

PC : thejakartapost.com

 ತೈಪೆ : ಗುರುವಾರ ಉತ್ತರ ತೈವಾನ್ ಗೆ ಅಪ್ಪಳಿಸಿದ ಗೆಮಿ ಚಂಡಮಾರುತದಿಂದ ವ್ಯಾಪಕ ನಾಶ-ನಷ್ಟವಾಗಿದ್ದು ಧಾರಾಕಾರ ಮಳೆ, ಪ್ರವಾಹದಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು 266 ಮಂದಿ ಗಾಯಗೊಂಡಿದ್ದಾರೆ. ಸರಕು ಹಡಗೊಂದು ಮುಳುಗಿದ್ದು ಹಡಗಿನಲ್ಲಿದ್ದ 9 ಸಿಬ್ಬಂದಿಗಳ ಬಗ್ಗೆ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಮಧ್ಯರಾತ್ರಿ ವೇಳೆ ತೈವಾನ್ ನ ಈಶಾನ್ಯ ಕರಾವಳಿಯ ಯಿಲಾನ್ ನಗರಕ್ಕೆ ಗಂಟೆಗೆ 227 ಕಿ.ಮೀ ವೇಗದ ಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಿದ್ದು ಕಳೆದ 8 ವರ್ಷಗಳಲ್ಲಿ ದ್ವೀಪರಾಷ್ಷ್ರ ಕ್ಕೆ  ಅಪ್ಪಳಿಸಿದ ಅತ್ಯಂತ ಬಲಿಷ್ಟ ಚಂಡಮಾರುತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಳಿಗ್ಗೆ 8:30ರ ವೇಳೆಗೆ ತೈವಾನ್ ಜಲಸಂಧಿಯನ್ನು ಪ್ರವೇಶಿಸಿ ಬಳಿಕ ಚೀನಾದ ಫುಜಿಯಾನ್ ಪ್ರಾಂತದ ಪುಝೌ ಕಡೆ ಮುಂದುವರಿದಿದೆ. ಚಂಡಮಾರುತದಿಂದಾಗಿ ತೈವಾನ್ನ ಸುಮಾರು 5 ಲಕ್ಷ ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ದಕ್ಷಿಣ ಬಂದರು ನಗರವಾದ ಕಾಹ್ಸಿಯುಂಗ್ನ ತೀರದ ಬಳಿ ತಾಂಝಾನಿಯಾ ಧ್ವಜ ಹೊಂದಿದ್ದ ಸರಕು ನೌಕೆಯೊಂದು ಮುಳುಗಿದೆ. ಹಡಗಿನಲ್ಲಿದ್ದ 9 ಮ್ಯಾನ್ಮಾರ್ ಪ್ರಜೆಗಳು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ಮಳೆ ಮತ್ತಷ್ಟು ಬಿರುಸುಗೊಳ್ಳುವ ಸೂಚನೆ ಇರುವುದರಿಂದ ದೇಶದಾದ್ಯಂತ ಶಾಲೆ, ಕಚೇರಿಗಳು ಮತ್ತು ವಾಣಿಜ್ಯ ಮಾರುಕಟ್ಟೆಗಳನ್ನು ಗುರುವಾರವೂ ಮುಚ್ಚಲಾಗಿದೆ. ಗುರುವಾರ ತೈವಾನ್ನ ಎಲ್ಲಾ ದೇಶೀಯ ಹಾಗೂ 185 ಅಂತರಾಷ್ಟ್ರೀಯ ವಿಮಾನಗಳನ್ನು ಹಾಗೂ ರೈಲುಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೆಮಿ ಚಂಡಮಾರುತ ಗುರುವಾರ ತಡರಾತ್ರಿ ಫುಜಿಯಾನ್ ಪ್ರಾಂತದ ಮೂಲಕ ಸಾಗಲಿರುವುದರಿಂದ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಮಳೆ, ನೆರೆಯನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದ್ದು ಕರಾವಳಿ ಪ್ರದೇಶಗಳಲ್ಲಿ ಅಪಾಯದ ಸಂದೇಶ ರವಾನಿಸಿರುವುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News