ತರ್ಕಬದ್ಧವಾಗಿ ಚಿಂತಿಸಿ: ಚೀನಾಕ್ಕೆ ತೈವಾನ್ ಆಗ್ರಹ
ತೈಪೆ : ಕಳೆದ ವಾರ ತೈವಾನ್ ಆಡಳಿತದ ವ್ಯಾಪ್ತಿಯಲ್ಲಿರುವ ಕಿನ್ಮೆನ್ ಜಲಸಂಧಿಯ ಬಳಿ ಚೀನಾದ ದೋಣಿ ಮುಳುಗಿ ಇಬ್ಬರು ಚೀನಾ ಯೋಧರು ಮೃತಪಟ್ಟ ಘಟನೆಯನ್ನು ಉಲ್ಲೇಖಿಸಿರುವ ತೈವಾನ್ `ಚೀನಾ ತರ್ಕಬದ್ಧವಾಗಿ ಚಿಂತಿಸಬೇಕು. ತನ್ನ ಸಮುದ್ರವ್ಯಾಪ್ತಿಯನ್ನು ರಕ್ಷಿಸಿಕೊಳ್ಳಲು ತೈವಾನ್ ಸಮರ್ಥವಾಗಿದೆ ಎಂದಿದೆ.
ಕಳೆದ ವಾರ ಚೀನಾದ ದೋಣಿ ಕಿನ್ಮೆನ್ ಜಲಸಂಧಿಯ ಬಳಿ ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದಾಗ ತೈವಾನ್ನ ಕರಾವಳಿ ಕಾವಲು ಪಡೆಯ ಬೋಟ್ಗಳು ಅದನ್ನು ಸುತ್ತುವರಿದಿದ್ದವು. ಈ ಸಂದರ್ಭ ಚೀನಾದ ದೋಣಿ ಮುಳುಗಿದ್ದು ಅದರಲ್ಲಿದ್ದ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಚೀನಾ-ತೈವಾನ್ ನಡುವಿನ ಉದ್ವಿಗ್ನತೆ ಹೆಚ್ಚಿದೆ. ತೈವಾನ್ ಜಲಪ್ರದೇಶದಲ್ಲಿ ಗಸ್ತು ತಿರುಗುವಿಕೆ ಹೆಚ್ಚಿಸುವುದಾಗಿ ಚೀನಾ ಘೋಷಿಸಿದ್ದು ಸೋಮವಾರ ಚೀನಾದ ಕರಾವಳಿ ಕಾವಲುಪಡೆಯ ಯೋಧರು ತೈವಾನ್ನ ವಿಹಾರ ನೌಕೆಯೊಂದನ್ನು ಪ್ರವೇಶಿಸಿ ಹಡಗಿನ ಕ್ಯಾಪ್ಟನ್ ಹಾಗೂ ಪ್ರಯಾಣಿಕರ ತಪಾಸಣೆ ನಡೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೈವಾನ್ನ ಪ್ರೀಮಿಯರ್ ಚೆನ್ ಚಿಯೆನ್-ಜೆನ್ ` 1992ರಿಂದ ನಿಷೇಧಿತ ಮತ್ತು ನಿರ್ಬಂಧಿತ ಸಮುದ್ರ ಪ್ರದೇಶದ ಬಗ್ಗೆ ಎರಡೂ ದೇಶಗಳಿಗೆ ಅರಿವಿದೆ. ನಮ್ಮ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಸುರಕ್ಷತೆ ಮತ್ತು ನಮ್ಮ ಮೀನುಗಾರರ ಹಕ್ಕುಗಳನ್ನು ಖಾತರಿ ಪಡಿಸಲು ಮತ್ತು ಸಮುದ್ರ ಪ್ರದೇಶಗಳನ್ನು ರಕ್ಷಿಸುವುದನ್ನು ಮುಂದುವರಿಸಲಿದ್ದೇವೆ' ಎಂದಿದ್ದಾರೆ.