ನೆತನ್ಯಾಹು ಪದಚ್ಯುತಿಗೆ ಆಗ್ರಹಿಸಿ ಇಸ್ರೇಲ್‍ನಲ್ಲಿ ಬೃಹತ್ ಪ್ರತಿಭಟನೆ | 16 ಮಂದಿಯ ಬಂಧನ
ಟೆಲ್ ಅವೀವ್: ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ತಕ್ಷಣ ಪದಚ್ಯುತಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಮತ್ತು ಹಮಾಸ್‍ನ ಒತ್ತೆಸೆರೆಯಲ್ಲಿರುವವರನ್ನು ಸುರಕ್ಷಿತವಾಗಿ ವಾಪಾಸು ಕರೆತರಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಸ್ರೇಲ್ ರಾಜಧಾನಿ ಟೆಲ್‍ಅವೀವ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್‍ನ ವಶದಲ್ಲಿರುವ ಒತ್ತೆಯಾಳುಗಳ ಹೆಸರು ಮತ್ತು ಫೋಟೋವನ್ನು ಹೊಂದಿರುವ ಟಿ-ಶರ್ಟ್‍ಗಳನ್ನು ಧರಿಸಿಕೊಂಡು ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇಸ್ರೇಲ್-ಹಮಾಸ್ ನಡುವಿನ ಯುದ್ಧ 5 ತಿಂಗಳಿಂದ ನಡೆಯುತ್ತಿದ್ದು ಈಗಲೂ ಹಮಾಸ್‍ನ ವಶದಲ್ಲಿ ಸುಮಾರು 131 ಒತ್ತೆಯಾಳುಗಳಿದ್ದು ಇದರಲ್ಲಿ 31 ಮಂದಿ ಮೃತಪಟ್ಟಿರುವುದಾಗಿ ಊಹಿಸಲಾಗಿದೆ. ಗಾಝಾದಲ್ಲಿ ಮಾನವೀಯ ದುರಂತದ ಪರಿಸ್ಥಿತಿಯಿದ್ದು ಅಂತರಾಷ್ಟ್ರೀಯ ನೆರವು ಪೂರೈಕೆಗೆ ಪೂರಕವಾಗಿ ಕದನ ವಿರಾಮ ಜಾರಿಯಾಗಬೇಕೆಂದು ಅಂತರಾಷ್ಟ್ರೀಯ ಸಮುದಾಯ ಆಗ್ರಹಿಸುತ್ತಿದೆ. ಆದರೆ ಗಾಝಾದಲ್ಲಿ ಕದನ ವಿರಾಮ ಜಾರಿಯಾದರೆ ಅದು ಹಮಾಸ್‍ನ ಗೆಲುವಾಗಲಿದೆ ಎಂದು ಇಸ್ರೇಲ್ ಸರಕಾರ ವಿರೋಧಿಸುತ್ತಿದೆ.
ಆದರೆ ಈಗ ಕದನ ವಿರಾಮದ ಹೊರತಾಗಿ ನಮಗೆ ಬೇರೆ ಆಯ್ಕೆಗಳಿಲ್ಲ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಕದನ ವಿರಾಮ ಜಾರಿಗೆ ಸರಕಾರ ಒಪ್ಪಬೇಕು. ಇಲ್ಲದಿದ್ದರೆ ಬೆಂಜಮಿನ್ ನೆತನ್ಯಾಹು ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ನೆತನ್ಯಾಹು ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಅವರಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶದ ಹೊರತು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯ ಉದ್ದೇಶವಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿಯಲ್ಲಿ ತಡೆ ನಡೆಸಿದ ಪ್ರತಿಭಟನಾಕಾರರನ್ನು ಜಲಫಿರಂಗಿ ಬಳಸಿ ಪೊಲೀಸರು ಚದುರಿಸಿದ್ದು ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕಾಗಿ 16 ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, 2021ರಲ್ಲಿ ಉತ್ತರ ಇಸ್ರೇಲ್‍ನಲ್ಲಿ 45 ಯೆಹೂದಿ ಯಾತ್ರಿಕರ ಸಾವಿಗೆ ಕಾರಣವಾದ ನೂಕುನುಗ್ಗಲು ದುರಂತಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೈಯಕ್ತಿಕ ಹೊಣೆ ವಹಿಸಬೇಕೆಂದು ತನಿಖಾ ತಂಡದ ವರದಿ ಹೇಳಿದೆ. ಆದರೆ ಈ ತನಿಖಾ ವರದಿ ರಾಜಕೀಯ ಪ್ರೇರಿತ ಎಂದು ನೆತನ್ಯಾಹು ಅವರ ಲಿಕುಡ್ ಪಕ್ಷ ಖಂಡಿಸಿದೆ.