ಬ್ರಿಟಿಶ್ ವಾಯುಪಡೆ ಕ್ಲಬ್ ನಲ್ಲಿ ಬ್ರಿಟಿಶ್ ರಾಣಿಯಿಂದ ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಭಾವಚಿತ್ರ ಅನಾವರಣ

Update: 2023-08-31 17:19 GMT

Photo- PTI

ಲಂಡನ್: ಭಾರತೀಯ ಮೂಲದ ಬ್ರಿಟಿಶ್ ಗೂಢಚಾರಿಣಿ ಹಾಗೂ ಟಿಪ್ಪು ಸುಲ್ತಾನ್ ವಂಶಸ್ಥರಾದ ನೂರ್ ಇನಾಯತ್ ಖಾನ್ ಅವರ ನೂತನ ಭಾವಚಿತ್ರವನ್ನು ಬ್ರಿಟನ್ ರಾಣಿ ಕ್ಯಾಮಿಲ್ಲಾ ಅವರು ಲಂಡನ್ ನ ರಾಯಲ್ ಏರ್ಫೋರ್ಸ್ (ಆರ್ಎಎಫ್) ಕ್ಲಬ್ನಲ್ಲಿ ಗುರುವಾರ ಅನಾವರಣಗೊಳಿಸಿದರು. ಎರಡನೆ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ನ ವಿಶೇಷ ಕಾರ್ಯಾಚರಣೆಗಳ ಎಕ್ಸ್ಕ್ಯೂಟಿವ್ (ಎಸ್ಓಇ) ಸಂಸ್ಥೆಗೆ ರಹಸ್ಯ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ ನೂರ್ ಇನಾಯತ್ ಅವರ ತ್ಯಾಗವನ್ನು ಗೌರವಿಸುವ ಸಲುವಾಗಿ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತೆಂದು ಆರ್ಎಎಫ್ ಮೂಲಗಳು ತಿಳಿಸಿವ.

ಭಾವಚಿತ್ರವನ್ನು ಇರಿಸಲಾದ ಕೊಠಡಿಗೆ ರಾಣಿ ಕ್ಯಾಮಿಲ್ಲಾ ಅವರು ‘ನೂರ್ ಇನಾಯತ್ ಖಾನ್ ರೂಮ್’ ಎಂದು ನಾಮಕರಣ ಮಾಡಿದ್ದಾರೆ.

1942ರಲ್ಲಿ ಬ್ರಿಟನ್ ಬೇಹುಗಾರಿಕಾ ದಳ ಎಸ್ಓಇಗೆ ನೇಮಕಗೊಳ್ಳುವ ಮುನ್ನ ನೂರ್ ಅವರು ಆರ್ಎಎಫ್ನ ಮಹಿಳೆಯರ ಆಕ್ಸಿಲರಿ ವಾಯುಪಡೆ (ಡಬ್ಲ್ಯುಎಎಎಫ್)ಯ ಸದಸ್ಯೆಯಾಗಿದ್ದರು. ಮಹಾನ್ ಪರಾಕ್ರಮಗಳಿಗಾಗಿ ನೀಡಲಾಗುವ ಜಾರ್ಜ್ ಕ್ರಾಸ್ (ಜಿಸಿ) ಪುರಸ್ಕಾರವನ್ನು ಪಡೆದ ಡಬ್ಬುಎಎಫ್ನ ಇಬ್ಬರು ಸದಸ್ಯರಲ್ಲಿ ನೂರ್ ಒಬ್ಬರು.

‘‘ಆರ್‌ಎಎಫ್‌ ಕ್ಲಬ್ನಲ್ಲಿ ರಾಣಿಯವರು ನೂರ್ ಇನಾಯತ್ ಖಾನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದು ಒಂದು ಹೆಮ್ಮೆಯ ಕ್ಷಣವಾಗಿದೆ’’ ಎಂದು ಬ್ರಿಟಿಶ್ ಗೂಢಚಾರಿಣಿಯ ಜೀವನಚರಿತ್ರೆ ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಪುಸ್ತಕಕೃತಿಯ ಒಂದು ಪ್ರತಿಯನ್ನು ರಾಣಿ ಕ್ಯಾಮಿಲಾ ಅವರಿಗೆ ಸಮರ್ಪಿಸಿದ ಬ್ರಿಟನ್ನ ಭಾರತೀಯ ಲೇಖಕಿ ಶರ್ಬಾನಿ ಬಸು ಹೇಳಿದ್ದಾರೆ.

‘‘ನೂರ್ ಅವರ ಕತೆಯನ್ನು ಹೇಳುವುದು ನನಗೆ ಒದಗಿದ ಸೌಭಾಗ್ಯವಾಗಿದೆ. ಈ ಅದ್ಭುತವಾದ ಭಾವಚಿತ್ರವನ್ನು ಹಲವು ತಲೆಮಾರುಗಳ ಯುವ ಮಹಿಳೆಯರು ಹಾಗೂ ಪುರುಷರು ವೀಕ್ಷಿಸಲಿದ್ದಾರೆ. ನೂರ್ ಅವರ ಕಥೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ’’ಎಂದು ಬಸು ಹೇಳಿದರು.

ಎರಡನೆ ಮಹಾಯುದ್ಧ ಕಾಲದಲ್ಲಿ ಫ್ರಾನ್ಸ್ ನೊಳಗೆ 1943 ರ ಜೂನ್ 16ರಂದು ಲೈಸ್ಯಾಂಡರ್ ವಿಮಾನದ ಮೂಲಕ ರಹಸ್ಯವಾಗಿ ನೂರ್ ಅವರು ಬಂದಿಳಿದಿದ್ದರು. ನಾಝಿಪಡೆಗಳ ವಿರುದ್ಧ ಹೋರಾಡುತ್ತಿದ್ದ ಫ್ರೆಂಚ್ ಪಡೆಗಳಿಗೆ ಸಂವಹನ ಗುಪ್ತಚರಳಾಗಿ ಕೆಲಸ ಮಾಡಿದ್ದರು. ಆದರೆ ಕೆಲವು ವಾರಗಳ ಬಳಿಕ ನಾಝಿ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದರು. ನಾಝಿ ಗೂಢಚಾರರರು ಅವರಿಗೆ ಚಿತ್ರಹಿಂಸೆ ನೀಡಿದ ಹೊರತಾಗಿಯೂ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದರು. ಆನಂತರ ನೂರ್ ಅವರನ್ನು ಜರ್ಮನಿಯ ಕಾರಾಗೃಹದಲ್ಲಿರಿಸಲಾಗಿದ್ದು, ಅಲ್ಲಿ ಅವರು ಎರಡು ಬಾರಿ ತಪ್ಪಿಸಿಕೊಳ್ಳಲು ವಿಫಲ ಯತ್ನ ಮಾಡಿದ್ದರು. ಆದರೆ ಅವೆಲ್ಲವೂ ವಿಫಲವಾದವು. ಕೊನೆಗೆ ನೂರ್ ಅವರನ್ನು ನಾಝಿ ಪಡೆಗಳು ಜರ್ಮನಿಯ ಡಶಾವ್‌ನಲ್ಲಿರುವ ಯಾತನಾಶಿಬಿರದಲ್ಲಿ ಹತ್ಯೆಗೈದವು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News