ತೋಷಖಾನಾ 2.0 ಪ್ರಕರಣ: ಇಮ್ರಾನ್ ಖಾನ್ ಮತ್ತು ಪತ್ನಿಗೆ ಮಧ್ಯಂತರ ಜಾಮೀನು
ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಎರಡನೇ ತೋಷಖಾನಾ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸ್ಥಳೀಯ ನ್ಯಾಯಾಲಯವು ಜನವರಿ 7ರವರೆಗೆ ವಿಸ್ತರಿಸಿದೆ.
ಆದರೆ 72 ವರ್ಷದ ಇಮ್ರಾನ್ ಖಾನ್, ಇತರ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿರುವುದರಿಂದ ಅವರು ಜೈಲಿನಲ್ಲಿಯೇ ಉಳಿದುಕೊಳ್ಳಬೇಕಾಗಿದೆ. ಈ ಪ್ರಕರಣ ಇನ್ನೋರ್ವ ಆರೋಪಿಯಾದ ಇಮ್ರಾನ್ ಅವರ ಪತ್ನಿ ಬೀಬಿ ಬುಶ್ರಾ ಅವರ ಜಾಮೀನು ಅರ್ಜಿಯ ಆಲಿಕೆಯನ್ನು ಕಳೆದ ಆಕ್ಟೋಬರ್‌ನಲ್ಲಿ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್ ಆಕ್ಟೋಬರ್‌ನಲ್ಲಿ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು.
ತೋಷಖಾನಾ 2.0 ಎಂದು ಕರೆಯಲಾಗುವ ಈ ಪ್ರಕರಣಕ್ಕೆ ಸಂಬಂಧಿಸಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರು ಮಧ್ಯಂತರ ಜಾಮೀನು ಬಿಡುಗಡೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸೆಶನ್ಸ್ ನ್ಯಾಯಾಧೀಶ ಮುಹಮ್ಮದ್ ಅಫ್ಝಲ್ ಮುಜೋಕಾ ಅವರು ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿ ಇವರಿಬ್ಬರಿಬ್ಬರ ವಿರುದ್ಧ ಕಳೆದ ವಾರ ವಿಚಾರಣಾ ನ್ಯಾಯಾಲಯವು ದೋಷಾರೋಪಣೆ ದಾಖಲಿಸಿಕೊಂಡಿತ್ತು. ವಿಶೇಷ ಕೇಂದ್ರೀಯ ನ್ಯಾಯಾಧೀಶ ಶಾರೂಕ್ ಆರ್ಜೂಮಂಡ್ ಅವರು ಚಾರ್ಜ್‌ಶೀಟ್ ಓದಿದ್ದರು.
ದೋಷಾರೋಪಣೆಯನ್ನು ದಾಖಲಿಸಿದ ಬಳಿಕ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿತ್ತು. ಅಂದು ಫೆಡೆರಲ್‌ತನಿಖಾ ಏಜೆನ್ಸಿಯು ತನ್ನ 28 ಸಾಕ್ಷಿಗಳ ಪೈಕಿ ನಾಲ್ಕು ಸಾಕ್ಷಿಗನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ.
2021ರ ಮೇ ತಿಂಗಳಲ್ಲಿ ಆಗ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರು ಸೌದಿ ಆರೇಬಿಯಕ್ಕೆ ಭೇಟಿ ನೀಡಿದ ಸಂದರ್ಭ ತಮಗೆ ಉಡುಗೊರೆಯಾಗಿ ನೀಡಿದ್ದ ಬುಲ್ಗಾರಿ ಆಭರಣವನ್ನು ಅಕ್ರಮವಾಗಿ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು.
ಒಂದು ರಿಂಗ್, ಬ್ರೇಸ್‌ಲೆಟ್, ಕತ್ತಿನ ಸರ ಹಾಗೂ ಒಂದು ಜೋಡಿ ಕಿವಿಯೋಲೆಗಳನ್ನು ಈ ಆಭರಣದ ಸೆಟ್ ಒಳಗೊಡಿದ್ದು, ಅವುಗಳ ಒಟ್ಟು ಮೌಲ್ಯ 7.50 ಕೋಟ ಪಾಕಿಸ್ತಾನಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಆದರೆ ದಂಪತಿಯು ಆಭರಣದ ಸೆಟ್‌ನ ಮೌಲ್ಯವನ್ನು ತೀರಾ ಕಡಿಮೆಗೊಳಿಸಿ, ತಮ್ಮ ವಶದಲ್ಲಿ ಇರಿಸಿದ್ದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ 3.29 ಕೋಟಿ ರೂ.ನಷ್ಟವಾಗಿತ್ತು. 2022ರ ಎಪ್ರಿಲ್‌ನಲ್ಲಿ ಇಮ್ರಾನ್‌ಖಾನ್ ಸರಕಾರವನ್ನು ಅವಿಶ್ವಾಸ ಮತದ ಮೂಲಕ ಪತನಗೊಳಿಸಲಾಗಿತ್ತು.