ಟ್ರಂಪ್ ಗಡೀಪಾರು ಕ್ರಮಗಳನ್ನು ಖಂಡಿಸಿದ್ದ ಪೋಪ್ ಫ್ರಾನ್ಸಿಸ್; ಸಾವಿಗೆ ಕೆಲ ದಿನಗಳ ಮೊದಲು ಬಹಿರಂಗ ಪತ್ರದಲ್ಲಿ ಟೀಕೆ

ಪೋಪ್ ಫ್ರಾನ್ಸಿಸ್ | PTI
ವ್ಯಾಟಿಕನ್: ಸೋಮವಾರ ನಿಧನರಾದ ರೋಮನ್ ಕ್ಯಾಥೊಲಿಕ್ ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್, ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮೂಹಿಕ ಗಡೀಪಾರು ಕ್ರಮಗಳನ್ನು ಖಂಡಿಸಿ ಬಹಿರಂಗ ಪತ್ರ ಬರೆದಿದ್ದರು ಎಂದು ವರದಿಯಾಗಿದೆ.
ಫೆಬ್ರವರಿಯಲ್ಲಿ ಅಮೆರಿಕದ ಬಿಷಪ್ ಗಳಿಗೆ ಬಹಿರಂಗ ಪತ್ರ ಬರೆದಿದ್ದ ಫ್ರಾನ್ಸಿಸ್, ವಲಸೆ ವಿರೋಧಿ ನಿರೂಪಣೆಗಳನ್ನು ತಿರಸ್ಕರಿಸುವಂತೆ ಕ್ಯಾಥೊಲಿಕರನ್ನು ಆಗ್ರಹಿಸಿದ್ದರು. `ಕಷ್ಟದ ಸಂದರ್ಭದಲ್ಲಿ ಮತ್ತೊಂದು ದೇಶಕ್ಕೆ ಅನಿವಾರ್ಯವಾಗಿ ಹೋಗುವ ಜನರನ್ನು ಮುಲಾಜಿಲ್ಲದೆ ಗಡೀಪಾರು ಮಾಡುವುದು ಮಹಿಳೆಯರು, ಪುರುಷರು ಹಾಗೂ ಸಂಪೂರ್ಣ ಕುಟುಂಬದ ಘನತೆಯನ್ನು ಉಲ್ಲಂಘಿಸುತ್ತದೆ' ಎಂದು ಉಲ್ಲೇಖಿಸಿದ್ದರು. ಸಾಮೂಹಿಕ ಗಡೀಪಾರು ಯೋಜನೆಯ ಮೂಲಕ ಅಮೆರಿದಲ್ಲಿ ಆರಂಭಗೊಂಡಿರುವ ಪ್ರಮುಖ ಬಿಕ್ಕಟ್ಟನ್ನು ನಿಕಟವಾಗಿ ಗಮನಿಸುತ್ತಿದ್ದೇನೆ. ಬಲಪ್ರಯೋಗವನ್ನು ಆಧರಿಸಿರುವ ಹಲವು ನೀತಿಗಳು ಕೆಟ್ಟದಾಗಿ ಆರಂಭಗೊಂಡು ಕೆಟ್ಟ ರೀತಿಯಲ್ಲಿಯೇ ಕೊನೆಯಾಗುತ್ತದೆ ಎಂದು ಟೀಕಿಸಿದ್ದ ಪೋಪ್, ವಲಸಿಗರ ಗಡೀಪಾರು ಬಿಕ್ಕಟ್ಟು ನಾಗರಿಕತೆಯ ದುರಂತ ಎಂದು ಬಣ್ಣಿಸಿದ್ದರು.
ಇದೇ ಸಂದರ್ಭ ದೇಶಕ್ಕೆ ಆಗಮಿಸುವಾಗ ಅಥವಾ ದೇಶದಲ್ಲಿ ಇರುವಾಗ ಹಿಂಸಾಚಾರ ಅಥವಾ ಗಂಭೀರ ಅಪರಾಧ ಕೃತ್ಯ ಎಸಗುವ ವಲಸಿಗರನ್ನೂ ಖಂಡಿಸಬೇಕು ಮತ್ತು ತನ್ನನ್ನು ಹಾಗೂ ಪ್ರಜೆಗಳ ಭದ್ರತೆಯನ್ನು ರಕ್ಷಿಸುವ ರಾಷ್ಟ್ರದ ಹಕ್ಕನ್ನೂ ನಾವು ಗುರುತಿಸಬೇಕಾಗಿದೆ ಎಂದು ಪೋಪ್ ಅಭಿಪ್ರಾಯ ಪಟ್ಟಿದ್ದರು.