ಚೀನಾದ ಮೇಲಿನ ʼಸುಂಕʼಷ್ಟಕ್ಕೆ ಕಡಿವಾಣ : ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್: ಚೀನಾದೊಂದಿಗಿನ ವ್ಯಾಪಾರ ಯುದ್ಧದಲ್ಲಿ ಸಂಭಾವ್ಯ `ಯು-ಟರ್ನ್'ನ ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಚೀನಾದ ಸರಕುಗಳ ಮೇಲಿನ ಅಧಿಕ ಸುಂಕಗಳು ಗಣನೀಯವಾಗಿ ಇಳಿಯುತ್ತವೆ. ಆದರೆ ಶೂನ್ಯ ಮಟ್ಟಕ್ಕೆ ಇಳಿಯುವುದಿಲ್ಲ' ಎಂದು ಘೋಷಿಸಿದ್ದಾರೆ.
ಮಂಗಳವಾರ ಸಂಜೆ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ನೀಡಿರುವ ಹೇಳಿಕೆ ಮುಯ್ಯಿಗೆ ಮುಯ್ಯಿ ಎಂಬಂತೆ ಪ್ರತೀಕಾರ ಕ್ರಮದ ಬಳಿಕ ಅಮೆರಿಕ ಅಧ್ಯಕ್ಷರ ಕಠಿಣ ನಿಲುವು ಸಡಿಲಗೊಳ್ಳುವ ಸೂಚನೆ ನೀಡಿದೆ. ಸುದ್ಧಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ `ಚೀನಾದ ವಿರುದ್ಧದ 145% ಸುಂಕ ತುಂಬಾ ಹೆಚ್ಚಾಗಿದೆ ಮತ್ತು ಇಷ್ಟು ಹೆಚ್ಚು ಇರುವುದಿಲ್ಲ. ಗಣನೀಯವಾಗಿ ಕಡಿಮೆಯಾಗಲಿದೆ, ಆದರೆ ಶೂನ್ಯಕ್ಕೆ ತಲುಪುವುದಿಲ್ಲ' ಎಂದರು.
ಅಮೆರಿಕ ಮತ್ತು ಚೀನಾ ನಡುವಿನ ಅಧಿಕ ಸುಂಕದ ಪ್ರಮಾಣವು ಆರ್ಥಿಕತೆಗಳ ನಡುವಿನ ವ್ಯಾಪಾರವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ ಎಂದು ಇದಕ್ಕೂ ಮುನ್ನ ಹಣಕಾಸು ಇಲಾಖೆಯ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ಸ್ ಹೇಳಿದ್ದರು.
ಟ್ರಂಪ್ ಹಾಗೂ ಬೆಸೆಂಟ್ಸ್ ಹೇಳಿಕೆಯ ಬೆನ್ನಲ್ಲೇ ಅಮೆರಿಕದ ಸ್ಟಾಕ್ ಮಾರ್ಕೆಟ್ ಚೇತರಿಸಿಕೊಂಡಿದ್ದು ಅಮೆರಿಕದ ಮೂರೂ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಾಂಕಗಳು ದಿನದ ಗರಿಷ್ಠ ಮಟ್ಟ ತಲುಪಿವೆ. ಏಶ್ಯಾದ ಪ್ರಮುಖ ಸ್ಟಾಕ್ ಮಾರ್ಕೆಟ್ಗಳಲ್ಲೂ ಬುಧವಾರ ಚೇತರಿಕೆ ಕಂಡುಬಂದಿದ್ದು ಹಾಂಕಾಂಗ್ ನ ಹ್ಯಾಂಗ್ಸೆಂಗ್ ಸೂಚ್ಯಾಂಕ ದಿನದ ವಹಿವಾಟಿನ ಅಂತ್ಯಕ್ಕೆ 2% ಏರಿಕೆ ದಾಖಲಿಸಿದ್ದರೆ, ಜಪಾನ್ ನ ನಿಕ್ಕಿ 225 ಸೂಚ್ಯಾಂಕವೂ 2% ಏರಿಕೆ ದಾಖಲಿಸಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಾಂಕ 1.5% ಏರಿಕೆ ದಾಖಲಿದೆ. ಬ್ರಿಟನ್, ಇಟಲಿ, ಜರ್ಮನಿಯಲ್ಲೂ ಸ್ಟಾಕ್ಮಾರ್ಕೆಟ್ನ ದಿನದ ವಹಿವಾಟು ಗಳಿಕೆ ದಾಖಲಿಸಿರುವುದಾಗಿ ವರದಿಯಾಗಿದೆ.