ಅಮೆರಿಕ | ಕೇವಲ 100 ದಿನಗಳ ಅಧಿಕಾರಾವಧಿಯಲ್ಲಿ ಏಳು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದ ಡೊನಾಲ್ಡ್ ಟ್ರಂಪ್ ಜನಪ್ರಿಯತೆ!
ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಎರಡನೆಯ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿರುವ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕೇವಲ 100 ದಿನಗಳ ಆಡಳಿತದ ಅವಧಿಯಲ್ಲಿ ಏಳು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದಿದೆ ಎಂಬ ಸಂಗತಿ CNN ಸುದ್ದಿ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಅಮೆರಿಕ ಅಧ್ಯಕ್ಷರಾಗಿ ಇಷ್ಟರಲ್ಲೇ 100 ದಿನಗಳನ್ನು ಪೂರೈಸಲಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕನ್ನರು ತೀವ್ರ ನಕಾರಾತ್ಮಕ ಅಭಿಪ್ರಾಯ ತಾಳಿದ್ದಾರೆ ಎಂಬ ಸಂಗತಿ ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
SSRS ಹಣಕಾಸು ನೆರವಿನೊಂದಿಗೆ CNN ಸುದ್ದಿ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಶೇ. 41ರಷ್ಟು ಮಂದಿ ಅಮೆರಿಕನ್ನರು ಮಾತ್ರ ಸಮರ್ಥಿಸಿದ್ದು, ಡೊನಾಲ್ಡ್ ಟ್ರಂಪ್ ರ ಮೊದಲ ಅವಧಿ ಸೇರಿದಂತೆ ಏಳು ದಶಕಗಳ ಹಿಂದೆ ಡ್ವೈಟ್ ಐಸೆನ್ ಹೋವರ್ ಅವರ 100 ದಿನಗಳ ಆಡಳಿತಕ್ಕೆ ಸಿಕ್ಕಿದ್ದ ಜನಮತಕ್ಕಿಂತ ಇದು ಕನಿಷ್ಠ ಮಟ್ಟದ್ದಾಗಿದೆ.
ಡೊನಾಲ್ಡ್ ಟ್ರಂಪ್ ರ ಆಡಳಿತವನ್ನು ಸಮರ್ಥಿಸಿರುವ ಅಮೆರಿಕನ್ನರ ಪ್ರಮಾಣ ಮಾರ್ಚ್ ನಿಂದ 4 ಅಂಕಗಳಷ್ಟು ಇಳಿಕೆಯಾಗಿದ್ದರೆ, ಫೆಬ್ರವರಿ ಅಂತ್ಯದೊಳಗೆ 7 ಅಂಕಗಳಷ್ಟು ಇಳಿಕೆಯಾಗಿದೆ. ಶೇ. 22ರಷ್ಟು ಅಮೆರಿಕನ್ನರು ಮಾತ್ರ ಡೊನಾಲ್ಡ್ ಟ್ರಂಪ್ ಆಡಳಿತವನ್ನು ನಾವು ಬಲವಾಗಿ ಸಮರ್ಥಿಸುತ್ತೇವೆ ಎಂದು ಹೇಳಿದ್ದು, ಅವರ ಆಡಳಿತವನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿಕೆ ನೀಡಿರುವ ಶೇ. 45ರಷ್ಟು ಅಮೆರಿಕನ್ನರಿಗಿಂತ ಇದು ಎರಡು ಪಟ್ಟು ಕಡಿಮೆಯಾಗಿದೆ. ಇದು ಅಮೆರಿಕ ಇತಿಹಾಸದಲ್ಲೇ ದಾಖಲೆಯ ಕನಿಷ್ಠ ಮಟ್ಟವಾಗಿದೆ.
ಕಳೆದ ಮಾರ್ಚ್ ತಿಂಗಳಿನಿಂದ ಡೊನಾಲ್ಡ್ ಟ್ರಂಪ್ ಆಡಳಿತದ ಪರವಾದ ಅಮೆರಿಕ ಮಹಿಳೆಯರು ಹಾಗೂ ಹಿಸ್ಪಾನಿಕ್ ಅಮೆರಿಕನ್ನರ ಒಲವಿನಲ್ಲಿ ಗಮನಾರ್ಹ ಇಳಿಕೆಯಾಗಿದೆ. (ಪ್ರತಿ ಗುಂಪಿನಲ್ಲೂ 7 ಅಂಕಗಳು ಇಳಿಕೆಯಾಗಿದ್ದು, ಮಹಿಳೆಯರ ಪೈಕಿ ಶೇ. 36ರಷ್ಟು ಇಳಿಕೆಯಾಗಿದ್ದರೆ, ಹಿಸ್ಪಾನಿಕ್ಸ್ ಪೈಕಿ ಶೇ. 28ರಷ್ಟು ಇಳಿಕೆಯಾಗಿದೆ). ಇದೇ ವೇಳೆ ಡೊನಾಲ್ಡ್ ಟ್ರಂಪ್ ಬಗೆಗಿನ ಪಕ್ಷವಾರು ದೃ಼ಷ್ಟಿಕೋನವು ಭಾರಿ ಪ್ರಮಾಣದಲ್ಲಿ ಧ್ರುವೀಕರಣಗೊಂಡಿದ್ದು, ಶೇ. 86ರಷ್ಟು ರಿಪಬ್ಲಿಕನ್ನರು ಡೊನಾಲ್ಡ್ ಟ್ರಂಪ್ ರ ಆಡಳಿತವನ್ನು ಸಮರ್ಥಿಸಿಕೊಂಡಿದ್ದರೆ, ಶೇ. 93ರಷ್ಟು ಡೆಮಾಕ್ರಟಿಕ್ ಗಳು ವಿರೋಧಿಸಿದ್ದಾರೆ.
ಆದರೆ, ಸ್ವತಂತ್ರ ರಾಜಕೀಯ ವಿಶ್ಲೇಷಕರ ಪ್ರಕಾರ, ಜನವರಿ 2021ರಲ್ಲಿ ಈ ಗುಂಪುಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿದ್ದ ಜನಪ್ರಿಯತೆಗೆ ಹೋಲಿಸಿದರೆ, ಇದೀಗ ಅದು ಶೇ. 31ರಷ್ಟು ಕುಸಿತಗೊಂಡಿದೆ.