ನಿರ್ಬಂಧ ಉಲ್ಲಂಘಿಸಿ ಇರಾನ್ ತೈಲವನ್ನು ಚೀನಾಕ್ಕೆ ಮಾರಲು ಯತ್ನಿಸಿದ ಇಬ್ಬರಿಗೆ ಶಿಕ್ಷೆ
ವಾಷಿಂಗ್ಟನ್ : ಅಮೆರಿಕ ವಿಧಿಸಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಇರಾನ್ನ ಪೆಟ್ರೋಲಿಯಂ ಅನ್ನು ಚೀನಾಕ್ಕೆ ಮಾರಾಟ ಮಾಡಲು ಹಾಗೂ ಹಣ ಅಕ್ರಮ ವರ್ಗಾವಣೆಯ ಪಿತೂರಿಗಾಗಿ ಕಳೆದ ನವೆಂಬರ್ನಲ್ಲಿ ಅಪರಾಧ ಸಾಬೀತಾಗಿದ್ದ ಟೆಕ್ಸಾಸ್ ರಾಜ್ಯದ ಇಬ್ಬರಿಗೆ ತಲಾ 45 ತಿಂಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ನ್ಯಾಯ ಇಲಾಖೆ ಹೇಳಿದೆ.
ಚೀನಾದ ಪ್ರಜೆ ಝೆನ್ಯು ವಾಂಗ್ ಮತ್ತು ಅಮೆರಿಕದ ಪ್ರಜೆ ಡೇನಿಯಲ್ ರೇ ಇತರರ ಜತೆ ಸೇರಿಕೊಂಡು 2019ರ ಜುಲೈಯಿಂದ 2020ರ ಫೆಬ್ರವರಿವರೆಗಿನ ಅವಧಿಯಲ್ಲಿ ಇರಾನ್ನ ನಿರ್ಬಂಧಿತ ತೈಲವನ್ನು ಚೀನಾದ ತೈಲ ಸಂಸ್ಕರಣಾಗಾರಕ್ಕೆ ಮಾರಾಟ ಮಾಡಿದ್ದರು. ಡೇನಿಯಲ್ ರೇ ಟೆಕ್ಸಾಸ್ನಲ್ಲಿ ತೈಲ ಮತ್ತು ಅನಿಲ ಉತ್ಪನ್ನಗಳ ಮಾರಾಟ ಸಂಸ್ಥೆಯ ಮಾಲಕನಾಗಿದ್ದು ಈತನಿಗೆ ಕೆಲವು ಏಜೆಂಟರು ಲಕ್ಷಾಂತರ ಡಾಲರ್ ಲಾಭದ ಆಮಿಷವೊಡ್ಡಿ ಜಾಲಕ್ಕೆ ಸೆಳೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣ ಸರಕಾರದ ಆದೇಶವನ್ನು ಉಲ್ಲಂಘಿಸಿರುವ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಟಾರ್ನಿ ಜನರಲ್ ಪ್ರತಿಪಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2020ರಲ್ಲಿ ಐದು ಮಂದಿಯನ್ನು ಬಂಧಿಸಲಾಗಿತ್ತು. ವಾಂಗ್ ಮತ್ತು ರೇ ಜತೆಗೆ ಇತರ ಇಬ್ಬರ ಅಪರಾಧವೂ ಸಾಬೀತಾಗಿದೆ ಎಂದು ವರದಿಯಾಗಿದೆ. ಇರಾನ್ನ ತೈಲದ ವಿರುದ್ಧ ಅಮೆರಿಕದ ನಿರ್ಬಂಧದ ಹೊರತಾಗಿಯೂ ಚೀನಾವು ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ.