ರಶ್ಯ-ಉಕ್ರೇನ್ ನಡುವೆ 230 ಕೈದಿಗಳ ವಿನಿಮಯ: ಯುಎಇ ಮಧ್ಯಸ್ಥಿಕೆ
Update: 2024-08-24 16:38 GMT
ಅಬುಧಾಬಿ: ರಶ್ಯ ಮತ್ತು ಉಕ್ರೇನ್ ನಡುವೆ 230 ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆಗೆ ಯುಎಇ ಮಧ್ಯಸ್ಥಿಕೆ ವಹಿಸಿದೆ. ಈ ತಿಂಗಳಿನಲ್ಲಿ ಉಕ್ರೇನ್ ರಶ್ಯದೊಳಗೆ ನುಗ್ಗಿದ ಬಳಿಕ ನಡೆಯುತ್ತಿರುವ ಮೊದಲ ಕೈದಿಗಳ ವಿನಿಮಯ ಪ್ರಕ್ರಿಯೆ ಇದಾಗಿದೆ.
2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದಂದಿನಿಂದ ಯುಎಇ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ 7ನೇ ವಿನಿಮಯ ಪ್ರಕ್ರಿಯೆ ಇದಾಗಿದೆ. ಇದುವರೆಗೆ ಯುಎಇ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳ 1,788 ಕೈದಿಗಳು ಬಿಡುಗಡೆಗೊಂಡಿದ್ದಾರೆ. ಯಶಸ್ವೀ ಮಧ್ಯಸ್ಥಿಕೆಯು ಯುಎಇ ಈ ಎರಡೂ ದೇಶಗಳ ಜತೆ ಹೊಂದಿರುವ ಸೌಹಾರ್ದ ಸಂಬಂಧದ ದ್ಯೋತಕವಾಗಿದೆ ಎಂದು ಯುಎಇ ವಿದೇಶಾಂಗ ಇಲಾಖೆ ಹೇಳಿದೆ.