ಬಂಧಿತ ಫೆಲೆಸ್ತೀನ್ ಪ್ರಜೆಗಳಿಗೆ ಇಸ್ರೇಲ್ ನಿಂದ ಚಿತ್ರಹಿಂಸೆ ಆರೋಪ ; ತನಿಖೆಗೆ ವಿಶ್ವಸಂಸ್ಥೆ ಪ್ರತಿನಿಧಿಯಿಂದ ಆಗ್ರಹ

Update: 2024-05-24 16:38 GMT

PC : PTI

ವಿಶ್ವಸಂಸ್ಥೆ : ಇಸ್ರೇಲ್‍ನಲ್ಲಿ ಬಂಧನದಲ್ಲಿರುವ ಫೆಲೆಸ್ತೀನ್ ಪ್ರಜೆಗಳನ್ನು ಕ್ರೂರ, ಅಮಾನವೀಯ ಮತ್ತು ಅವಮಾನಕರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಹಲವು ವರದಿಗಳ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಲಿಸ್ ಜಿಲ್ ಎಡ್ವಡ್ರ್ಸ್ ಆಗ್ರಹಿಸಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿ, ಕೈಗಳನ್ನು ಬೆನ್ನ ಹಿಂದಕ್ಕೆ ಕಟ್ಟಿದ ಸ್ಥಿತಿಯಲ್ಲಿ ಫೆಲೆಸ್ತೀನೀಯರನ್ನು ದೀರ್ಘಾವಧಿಯವರೆಗೆ ಬಂಧನದಲ್ಲಿರಿಸಿ ಥಳಿಸುವ ಬಗ್ಗೆ ಹಲವು ಆರೋಪಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಇಸ್ರೇಲ್ ಸರಕಾರ ಅಥವಾ ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಅಂತರಾಷ್ಟ್ರೀಯ ಮತ್ತು ಇಸ್ರೇಲ್ ಕಾನೂನಿಗೆ ಅನುಗುಣವಾಗಿ ತಾನು ಕಾರ್ಯನಿರ್ವಹಿಸುತ್ತಿದ್ದು ಬಂಧಿತರಿಗೆ ನೀರು, ಆಹಾರ , ಬಟ್ಟೆ ಮತ್ತು ಸೂಕ್ತ ಔಷಧದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿದೆ.

ಕೆಲವು ಬಂಧಿತರಿಗೆ ನಿದ್ದೆ ಮಾಡಲೂ ಅವಕಾಶವಿಲ್ಲ. ದೈಹಿಕ ಮತ್ತು ಲೈಂಗಿಕ ಹಿಂಸೆಯ ಬೆದರಿಕೆ ಒಡ್ಡಲಾಗುತ್ತಿದೆ. ಅತ್ಯಂತ ಅವಮಾನಕಾರಿ ಭಂಗಿಯಲ್ಲಿ ನಿಲ್ಲಿಸಿ ಫೋಟೋ ತೆಗೆಯುವುದು ಇತ್ಯಾದಿ ಅಮಾನವೀಯ ಮತ್ತು ಅವಹೇಳನಕಾರಿ ಪ್ರಕ್ರಿಯೆಗೆ ಅವರನ್ನು ಗುರಿಯಾಗಿಸುತ್ತಿರುವ ವರದಿಗಳಿವೆ.

ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಫೆಲೆಸ್ತೀನೀಯರನ್ನು ಮತ್ತಷ್ಟು ಅವಮಾನಕರ ಮತ್ತು ನಿಂದಿಸಲು ಅನುಮತಿಸುವ ವಾತಾವರಣವನ್ನು ಸೃಷ್ಟಿಸುವ ಬಗ್ಗೆ ಹೆಚ್ಚಿನ ಆತಂಕವಿದೆ ಎಂದು ಆಲಿಸ್ ಹೇಳಿದ್ದಾರೆ. ಚಿತ್ರಹಿಂಸೆ, ದೌರ್ಜನ್ಯದ ಎಲ್ಲಾ ದೂರುಗಳ ಬಗ್ಗೆಯೂ ಇಸ್ರೇಲ್ ಅಧಿಕಾರಿಗಳು ಕೂಡಲೇ ಪ್ರಾಮಾಣಿಕ, ಪಾರದರ್ಶಕ ಮತ್ತು ಪರಿಣಾಮಕಾರಿ ತನಿಖೆ ನಡೆಸಬೇಕು. ಕಮಾಂಡರ್ ಗಳ ಸಹಿತ ಎಲ್ಲಾ ಹಂತಗಳಲ್ಲೂ ತಪ್ಪಿತಸ್ಥರನ್ನು ಗುರುತಿಸಬೇಕು. ಸಂತ್ರಸ್ತರಿಗೆ ಪರಿಹಾರದ ಹಕ್ಕನ್ನು ಮಾನ್ಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಇಸ್ರೇಲ್‍ನ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಇಂತಹ ಪ್ರಕರಣ ಹೆಚ್ಚಿದೆ. ಸ್ವಾತಂತ್ರ್ಯದಿಂದ ವಂಚಿತರಾದ ವ್ಯಕ್ತಿಗಳನ್ನು ಯಾವಾಗಲೂ ಮಾನವೀಯವಾಗಿ ನಡೆಸಿಕೊಳ್ಳಬೇಕು. ಅವರ ಬಂಧನಕ್ಕೆ ಕಾರಣವಾದ ಸನ್ನಿವೇಶ ಯಾವುದೇ ಆಗಿರಲಿ, ಅವರಿಗೆ ಅಂತರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನಡಿ ಬರುವ ಎಲ್ಲಾ ಸುರಕ್ಷತೆ, ವ್ಯವಸ್ಥೆಗಳನ್ನು ಒದಗಿಸಬೇಕು. 2023ರ ಅಕ್ಟೋಬರ್ 7ರಿಂದ ಮಕ್ಕಳೂ ಸೇರಿದಂತೆ ಸಾವಿರಾರು ಫೆಲೆಸ್ತೀನೀಯರು ಇಸ್ರೇಲ್‍ನ ಬಂದೀಖಾನೆ ಇಲಾಖೆಯ ಜೈಲುಗಳು ಮತ್ತು ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ಯ ಶಿಬಿರಗಳಲ್ಲಿ ಬಂಧನದಲ್ಲಿರುವುದಾಗಿ ಅಂದಾಜಿಸಲಾಗಿದೆ.

ಕೆಲವು ಬಂಧನ ಕೇಂದ್ರಗಳಲ್ಲಿ ವ್ಯವಸ್ಥೆಗಳನ್ನು ಅಧಿಕೃತವಾಗಿ ಕೆಳಮಟ್ಟಕ್ಕೆ ಇಳಿಸಿರುವುದು ಸ್ವೀಕಾರಾರ್ಹವಲ್ಲ. ಎಲ್ಲಾ ಸಂದರ್ಭಗಳಲ್ಲೂ ಕನಿಷ್ಠ ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಸಂಘರ್ಷ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಾವು ಇತರರನ್ನು ಯಾವ ರೀತಿ ನಡೆಸಿಕೊಳ್ಳುತ್ತೇವೆ ಎಂಬುದು ನಾವು ಮಾನವ ಹಕ್ಕುಗಳನ್ನು ಎಷ್ಟು ಆಂತರಿಕಗೊಳಿಸಿದ್ದೇವೆ ಎಂಬುದರ ಸಂಕೇತವಾಗಿದೆ. ಯಾವುದೇ ಸಂದರ್ಭಗಳು, ಎಷ್ಟೇ ಅಸಾಧಾರಣ, ಅಸಾಮಾನ್ಯವಾಗಿದ್ದರೂ ಕೆಟ್ಟ ವರ್ತನೆ ಅಥವಾ ಚಿತ್ರಹಿಂಸೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾನವ ಹಕ್ಕುಗಳ ವೀಕ್ಷಕರಿಗೆ ಅವಕಾಶಕ್ಕೆ ಆಗ್ರಹ

2023ರ ಅಕ್ಟೋಬರ್ 7ರ ಬಳಿಕ ಫೆಲೆಸ್ತೀನೀಯರನ್ನು ಬಂಧನದಲ್ಲಿರಿಸಿರುವ ಎಲ್ಲಾ ಸ್ಥಳಗಳಿಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಮಾನವೀಯ ವೀಕ್ಷಕರ ಭೇಟಿ ಮತ್ತು ಪರಿಶೀಲನೆಗೆ ತಕ್ಷಣ ಅವಕಾಶ ನೀಡುವಂತೆ ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ ಇಸ್ರೇಲ್ ಸರಕಾರವನ್ನು ಆಗ್ರಹಿಸಿದ್ದಾರೆ. 

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News