ಗಾಝಾ ನಿರಾಶ್ರಿತರಿಗೆ ತ್ವರಿತ ಪರಿಹಾರ ಒದಗಿಸಲು ವಿಶ್ವಸಂಸ್ಥೆ ವಿಫಲ: ಇಸ್ರೇಲ್ ಆರೋಪ
ಟೆಲ್ಅವೀವ್: ಗಾಝಾದಲ್ಲಿ ತೀವ್ರಗೊಂಡಿರುವ ಮಾನವೀಯ ಬಿಕ್ಕಟ್ಟಿಗೆ ವಿಶ್ವಸಂಸ್ಥೆ ನಿಧಾನವಾಗಿ ಸ್ಪಂದಿಸುತ್ತಿದೆ. ಫೆಲೆಸ್ತೀನಿಯನ್ ನಿರಾಶ್ರಿತರಿಗೆ ನಿಗದಿಗೊಳಿಸಲಾದ `ಸುರಕ್ಷಿತ ವಲಯ'ವನ್ನು ವಿಶ್ವಸಂಸ್ಥೆಯ ಪರಿಹಾರ ಕಾರ್ಯಕರ್ತರು ಇನ್ನೂ ಪ್ರವೇಶಿಸಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಆರೋಪಿಸಿದ್ದಾರೆ.
ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳಿಂದ ನಿರೀಕ್ಷಿತ ಪ್ರಯತ್ನ ಇನ್ನೂ ಗಮನಕ್ಕೆ ಬಂದಿಲ್ಲ ಎಂದು ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ. ಉನ್ನತ ಹಮಾಸ್ ಮುಖಂಡರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಬೆನ್ನಟ್ಟುವಂತೆ ನೆತನ್ಯಾಹು ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ಗೆ ಆದೇಶಿಸಿದ್ದು ಹಮಾಸ್ನ ಉನ್ನತ ಮುಖಂಡರನ್ನು ಗುರಿಯಾಗಿಸಿ ನಡೆಸುವ ದಾಳಿ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ್ದಾರೆ. ಗುರುವಾರ ಗಾಝಾದಲ್ಲಿ ಹಮಾಸ್ನ 300 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ಕಾರ್ಯಾಚರಣೆಯ ಪ್ರಧಾನ ಕೇಂದ್ರಗಳು, ಭೂಗತ ಸುರಂಗಗಳು, ಶಸ್ತ್ರಾಸ್ತ್ರ ಗೋದಾಮು, ಟ್ಯಾಂಕ್ ವಿರೋಧಿ ಉಡಾವಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ ಎಂದು ಇಸ್ರೇಲ್ನ ಭದ್ರತಾ ಪಡೆ ಹೇಳಿದೆ.
ಈ ಮಧ್ಯೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಮರಾನ್ ಗುರುವಾರ ಇಸ್ರೇಲ್ಗೆ ಆಗಮಿಸಿದ್ದು ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಭೇಟಿಯಾಗಿ ಗಾಝಾದಲ್ಲಿ ಕದನ ವಿರಾಮ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.