ಪಹಲ್ಗಾಮ್ ದಾಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ: ದಾಳಿಯ ಪ್ರಾಯೋಜಕರ ವಿರುದ್ಧವೂ ಕ್ರಮಕ್ಕೆ ಕರೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ | PC : X
ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅತ್ಯಂತ ಬಲವಾಗಿ ಖಂಡಿಸಿದ್ದು ಈ ಘೋರ ಕೃತ್ಯ ನಡೆಸಿದವರನ್ನು ಗುರುತಿಸಿ ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಭಯೋತ್ಪಾದಕರ ಪ್ರಾಯೋಜಕರಿಗೂ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಿಹೇಳಿದೆ.
`ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ'ಯ ಬಗ್ಗೆ 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪತ್ರಿಕಾ ಹೇಳಿಕೆ ನೀಡಿದ್ದು `ಭಯೋತ್ಪಾದನೆಯು ಅದರ ಎಲ್ಲಾ ಪ್ರಕಾರಗಳು ಮತ್ತು ಅಭಿವ್ಯಕ್ತಿಗಳಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ. ಯಾವುದೇ ಭಯೋತ್ಪಾದನೆಯ ಕೃತ್ಯಗಳು ನ್ಯಾಯಸಮ್ಮತವಲ್ಲ ' ಎಂದು ಪುನರುಚ್ಚರಿಸಿದೆ.
ಈ ಖಂಡನೀಯ ಭಯೋತ್ಪಾದಕ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸು ನೆರವುದಾರರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಅವರನ್ನು ನ್ಯಾಯ ಪ್ರಕ್ರಿಯೆಗೆ ತರುವ ಅಗತ್ಯವನ್ನು ಭದ್ರತಾ ಮಂಡಳಿಯ ಸದಸ್ಯರು ಒತ್ತಿಹೇಳಿದ್ದಾರೆ.
ಎಲ್ಲಾ ರಾಷ್ಟ್ರಗಳು ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ತಮ್ಮ ಕಟ್ಟುಪಾಡುಗಳಿಗೆ ಅನುಗುಣವಾಗಿ ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲಾ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಪತ್ರಿಕಾ ಹೇಳಿಕೆಯೆಂದರೆ ಎಲ್ಲಾ 15 ಸದಸ್ಯರ ಪರವಾಗಿ ಭದ್ರತಾ ಮಂಡಳಿಯ ಅಧ್ಯಕ್ಷರು ಮಾಧ್ಯಮದವರಿಗೆ ನೀಡುವ ಘೋಷಣೆಯಾಗಿದೆ. ಕರಡು ಹೇಳಿಕೆಯನ್ನು ಅಮೆರಿಕ ರೂಪಿಸಿದ್ದು ಸಮಿತಿಯ ಸದಸ್ಯರು ಚರ್ಚಿಸಿದ ಬಳಿಕ ಎಪ್ರಿಲ್ ತಿಂಗಳಿಗೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಫ್ರಾನ್ಸ್ ನ ಪ್ರತಿನಿಧಿ ಹೇಳಿಕೆಯನ್ನು ಜಾರಿಗೊಳಿಸಿದ್ದಾರೆ.
ವಿಶ್ವಸಂಸ್ಥೆಯ ಸನದು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಅಂತರಾಷ್ಟ್ರೀಯ ನಿರಾಶ್ರಿತರ ಕಾನೂನು, ಅಂತರಾಷ್ಟ್ರೀಯ ಮಾನವೀಯ ಕಾನೂನು ಸೇರಿದಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಇತರ ಕಟ್ಟುಪಾಡುಗಳಿಗೆ ಅನುಗುಣವಾಗಿ ಎಲ್ಲಾ ದೇಶಗಳೂ ಎಲ್ಲಾ ರೀತಿಯಲ್ಲಿ ಹೋರಾಡುವ ಅಗತ್ಯವನ್ನು ಭದ್ರತಾ ಮಂಡಳಿ ಪುನರುಚ್ಚರಿಸಿದೆ.