ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ

Update: 2024-11-23 18:13 GMT

PC : PTI 

ವಿಶ್ವಸಂಸ್ಥೆ : ಮಾನವೀಯತೆಯ ವಿರುದ್ಧದ ಅಪರಾಧವನ್ನು ತಡೆಗಟ್ಟುವ ಮತ್ತು ಶಿಕ್ಷಿಸುವ ಒಪ್ಪಂದದ ಕುರಿತ ಸಮಾಲೋಚನೆಗೆ ಅನುವು ಮಾಡಿಕೊಡುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆ ಶುಕ್ರವಾರ ಅಂಗೀಕರಿಸಿದೆ.

ಒಪ್ಪಂದದಲ್ಲಿ ಬದಲಾವಣೆಗೆ ಪಟ್ಟು ಹಿಡಿದಿದ್ದ ರಶ್ಯ ಅಂತಿಮ ಕ್ಷಣದಲ್ಲಿ ಪಟ್ಟು ಸಡಿಲಿಸಿದ ಬಳಿಕ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಎಲ್ಲಾ 193 ಸದಸ್ಯರ ಬೆಂಬಲದಿಂದ ನಿರ್ಣಯ ಅಂಗೀಕಾರಗೊಂಡಿರುವುದಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಕಾನೂನು ಸಮಿತಿ ಘೋಷಿಸಿತು. ಇದನ್ನು ಎಲ್ಲಾ ಸದಸ್ಯರೂ ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು.

ಡಿಸೆಂಬರ್ 4ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯದ ಬಗ್ಗೆ ಅಂತಿಮ ಮತದಾನ ನಡೆಯಲಿದೆ. ಬಹು ಅಗತ್ಯವಿರುವ ಅಂತರಾಷ್ಟ್ರೀಯ ಒಪ್ಪಂದದ ಕುರಿತು ಮಾತುಕತೆ ಆರಂಭಕ್ಕೆ ಮೂಡಿರುವ ಸಹಮತವು ಐತಿಹಾಸಿಕ ಸಾಧನೆಯಾಗಿದ್ದು ದೀರ್ಘಾವಧಿಯಿಂದ ನಿರೀಕ್ಷಿಸಲಾಗಿತ್ತು ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆಯ ಹಿರಿಯ ಕಾನೂನು ಸಲಹೆಗಾರ ರಿಚರ್ಡ್ ಡಿಕರ್‍ರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

`ಇಥಿಯೋಪಿಯಾ, ಸುಡಾನ್, ಉಕ್ರೇನ್, ದಕ್ಷಿಣ ಇಸ್ರೇಲ್, ಗಾಝಾ ಮತ್ತು ಮ್ಯಾನ್ಮಾರ್ ನಲ್ಲಿ ನಾಗರಿಕರ ವಿರುದ್ಧ ನಡೆದಿರುವ ಅಪರಾಧದ ಹೊಣೆಯಿಂದ ಇನ್ನು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಣಾಯಕ ಸಂದೇಶವನ್ನು ಇದು ರವಾನಿಸಿದೆ' ಎಂದು ಅವರು ಹೇಳಿದ್ದಾರೆ.

ಮಾನವೀಯತೆಯ ವಿರುದ್ಧದ ಅಪರಾಧದ ಕುರಿತ ಒಪ್ಪಂದಕ್ಕೆ ಸಂಬಂಧಿಸಿದ ಪೂರ್ವ ಸಿದ್ಧತಾ ಅಧಿವೇಶನಗಳು 2026 ಮತ್ತು 2027ರಂದು ನಡೆಯಲಿದೆ ಮತ್ತು ಒಪ್ಪಂದ ಅಂತಿಮಗೊಳಿಸಲು 3 ವಾರಗಳ ಸಮಾಲೋಚನೆ 2028 ಮತ್ತು 2029ರಂದು ನಡೆಯಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ರಾಜಿ ಮನೋಭಾವದಿಂದ ರಶ್ಯ ತಿದ್ದುಪಡಿಗಳನ್ನು ಹಿಂತೆಗೆದುಕೊಂಡಿದೆ. ಆದರೆ ನಾವು ಒಮ್ಮತದಿಂದ ದೂರವಿದ್ದೇವೆ ಎಂದು ವಿಶ್ವಸಂಸ್ಥೆಗೆ ರಶ್ಯದ ಉಪ ರಾಯಭಾರಿ ಮಾರಿಯಾ ಝಬೊಲೊಟ್ಸ್‍ಕಯಾ ಹೇಳಿದ್ದಾರೆ. ಈ ನಿರ್ಣಾಯಕ ನಿರ್ಣಯದ ಬಗ್ಗೆ ಕಾರ್ಯ ನಿರ್ವಹಿಸಲು ನಾವು ಸಿದ್ಧರಿಲ್ಲ ಎಂದು ಇದರರ್ಥವಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಯುದ್ಧಾಪರಾಧ, ನರಮೇಧ ಹಾಗೂ ಇತರ ಚಿತ್ರಹಿಂಸೆ ಪ್ರಕರಣಗಳಿಗೆ ಸಂಬಂಧಿಸಿದ ಜಾಗತಿಕ ಒಪ್ಪಂದಗಳಿವೆ. ಆದರೆ ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಒಪ್ಪಂದಗಳಿಲ್ಲ. ಮೆಕ್ಸಿಕೋ ಮತ್ತು ಗ್ಯಾಂಬಿಯಾ ಮಂಡಿಸಿದ ಮತ್ತು 96 ಇತರ ದೇಶಗಳು ಅನುಮೋದಿಸಿದ ನಿರ್ಣಯವು ಈ ಅಂತರವನ್ನು ತುಂಬಲಿದೆ. ಇದು ಜೀವನದಲ್ಲಿ ಒಂದು ಬಾರಿ ದೊರೆತ ಅವಕಾಶವಾಗಿದೆ. ಮಾನವೀಯತೆಯ ವಿರುದ್ಧದ ಅಪರಾಧಗಳಿಲ್ಲದ ಮತ್ತು ಸಂತ್ರಸ್ತರ ಧ್ವನಿಯು ಅಪರಾಧಿಗಳ ಧ್ವನಿಗಿಂತ ದೊಡ್ಡದಾಗಿ ಕೇಳಿಸುವ ಜಗತ್ತನ್ನು ರೂಪಿಸಲು ಇದು ಐತಿಹಾಸಿಕ ಕ್ರಮವಾಗಿದೆ ಎಂದು ಗಾಂಬಿಯಾದ ಪ್ರತಿನಿಧಿ ಅಮದೌ ಜೈತೆಹ್ ಹೇಳಿದ್ದಾರೆ.

► ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್

ಯುದ್ಧಾಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ನರಮೇಧದ ಪ್ರಮುಖ ಅಪರಾಧಿಗಳನ್ನು ಶಿಕ್ಷಿಸಲು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಸ್ಥಾಪಿಸಲಾಗಿದ್ದು 124 ದೇಶಗಳು ಇದರ ಸದಸ್ಯತ್ವ ಪಡೆದಿವೆ. ನಾಗರಿಕರ ಮೇಲೆ ದೊಡ್ಡ ಪ್ರಮಾಣದ ದಾಳಿಯ ಭಾಗವಾಗಿ ಮಾನವೀಯತೆಯ ವಿರುದ್ಧದ ಅಪರಾಧ ಎಸಗಲಾಗುತ್ತದೆ. ಹತ್ಯೆ, ಅತ್ಯಾಚಾರ, ಬಂಧನ, ಬಲವಂತದ ನಾಪತ್ತೆ, ಲೈಂಗಿಕ ಗುಲಾಮಗಿರಿ, ಚಿತ್ರಹಿಂಸೆ, ಗಡೀಪಾರು ಮುಂತಾದ 15 ವಿಧಗಳನ್ನು ಪಟ್ಟಿ ಮಾಡಿದೆ. ಆದರೆ ಸುಮಾರು 70 ದೇಶಗಳು ಐಸಿಸಿಯ ಸದಸ್ಯರಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News