ಲೆಬನಾನ್‍ನಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಅಮೆರಿಕ, ಮಿತ್ರದೇಶಗಳ ಆಗ್ರಹ

Update: 2024-09-26 16:34 GMT

PC : PTI

ನ್ಯೂಯಾರ್ಕ್ : ಲೆಬನಾನ್‍ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಸಂಘರ್ಷ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ತಕ್ಷಣ 21 ದಿನಗಳ ಕದನ ವಿರಾಮಕ್ಕೆ ಅಮೆರಿಕ ಹಾಗೂ ಮಿತ್ರದೇಶಗಳು ಕರೆ ನೀಡಿವೆ.

ನ್ಯೂಯಾರ್ಕ್‍ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ನಡೆದ ಮಾತುಕತೆಯ ನೇಪಥ್ಯದಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ` ಲೆಬನಾನ್‍ನಲ್ಲಿ ಇತ್ತೀಚಿನ ಹೋರಾಟವು ಅಸಹನೀಯವಾಗಿದೆ ಮತ್ತು ಪ್ರಾದೇಶಿಕ ಉಲ್ಬಣಗೊಳ್ಳುವಿಕೆಯ ಸ್ವೀಕಾರಾರ್ಹವಲ್ಲದ ಅಪಾಯಕ್ಕೆ ಕಾರಣವಾಗಲಿದೆ. ಆದ್ದರಿಂದ ರಾಜತಾಂತ್ರಿಕ ಉಪಕ್ರಮಕ್ಕೆ ಅವಕಾಶ ಮಾಡಿಕೊಡಲು ಇಸ್ರೇಲ್-ಲೆಬನಾನ್ ಗಡಿಯಾದ್ಯಂತ ತಕ್ಷಣ 21 ದಿನಗಳ ಕದನ ವಿರಾಮ ಜಾರಿಗೊಳ್ಳಬೇಕು. ಇಸ್ರೇಲ್ ಮತ್ತು ಲೆಬನಾನ್ ಸರಕಾರ ಸೇರಿದಂತೆ ಎಲ್ಲರೂ ತಾತ್ಕಾಲಿಕ ಕದನ ವಿರಾಮವನ್ನು ಅನುಮೋದಿಸಬೇಕು' ಎಂದು ಉಲ್ಲೇಖಿಸಲಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸೌದಿ ಅರೆಬಿಯಾ, ಯುಎಇ ಮತ್ತು ಖತರ್ ಹೇಳಿಕೆಗೆ ಸಹಿ ಹಾಕಿವೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ಪ್ರತಿನಿಧಿ ರಾಬರ್ಟ್ ವುಡ್ ` ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಾವು ಇತರ ದೇಶಗಳೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಿದ್ದೇವೆ. ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ಉದ್ದೇಶದ ರಾಜತಾಂತ್ರಿಕ ಪ್ರಯತ್ನವನ್ನು ಭದ್ರತಾ ಮಂಡಳಿ ಬೆಂಬಲಿಸಬೇಕು' ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ, ಪ್ರಸ್ತಾವಿತ ಕದನ ವಿರಾಮ ಯೋಜನೆಯನ್ನು ಸ್ವಾಗತಿಸುವುದಾಗಿ ಹೇಳಿದರು. ` ಆಕ್ರಮಿತ ಲೆಬನಾನ್ ಪ್ರದೇಶದಿಂದ ಇಸ್ರೇಲ್ ಹಿಂದೆ ಸರಿಯುವ ಬಗ್ಗೆ ಭದ್ರತಾ ಮಂಡಳಿ ಖಾತರಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News