ಗಾಝಾದಲ್ಲಿ ತಕ್ಷಣ ಯುದ್ಧವಿರಾಮಕ್ಕೆ ಅಮೆರಿಕ ಆಗ್ರಹ : ವಿಶ್ವಸಂಸ್ಥೆ ನಿರ್ಣಯದಲ್ಲಿ ಪರಿಷ್ಕರಣೆ
ವಿಶ್ವಸಂಸ್ಥೆ : ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಂಡಿಸಲು ಸಿದ್ಧಪಡಿಸಿದ್ದ ಕರಡು ನಿರ್ಣಯದ ಪಠ್ಯವನ್ನು ಪರಿಷ್ಕರಿಸಿರುವ ಅಮೆರಿಕ, ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಸುಮಾರು 6 ವಾರಗಳ ತಕ್ಷಣ ಕದನ ವಿರಾಮಕ್ಕೆ ಕರೆ' ಎಂದು ಬದಲಿಸಿದೆ.
ಎರಡು ವಾರದ ಹಿಂದೆ ಸಿದ್ಧಪಡಿಸಿದ್ದ ಕರಡು ನಿರ್ಣಯದಲ್ಲಿ `ತಾತ್ಕಾಲಿಕ ಕದನ ವಿರಾಮ' ಎಂದು ಉಲ್ಲೇಖಿಸಲಾಗಿತ್ತು. ಅದನ್ನು `ತಕ್ಷಣ 6 ವಾರಗಳ ಕದನವಿರಾಮ' ಎಂದು ಪರಿಷ್ಕರಿಸಲಾಗಿದೆ. ಗಾಝಾದಲ್ಲಿ ಹಮಾಸ್‍ನ ಒತ್ತೆಸೆರೆಯಲ್ಲಿರುವವರ ಬಿಡುಗಡೆ ಷರತ್ತಿನಲ್ಲಿ ಕದನ ವಿರಾಮ ಜಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಹಕರಿಸಬೇಕು ಎಂದು ಅಮೆರಿಕ ಬಯಸಿದೆ.
ನಿರ್ಣಯವನ್ನು ತಕ್ಷಣ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತಕ್ಕೆ ಹಾಕಬೇಕೆಂದು ತಾನು ಬಯಸುವುದಿಲ್ಲ. ಮಾತುಕತೆ ನಡೆಯಲು ಸಾಕಷ್ಟು ಸಮಯಾವಕಾಶ ಸಿಗಬೇಕು ಎಂದು ಅಮೆರಿಕದ ಪ್ರತಿನಿಧಿ ಹೇಳಿದ್ದಾರೆ. ಗಾಝಾದಲ್ಲಿ ತಕ್ಷಣ ಕದನವಿರಾಮಕ್ಕೆ ಆಗ್ರಹಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರು ಕರಡು ನಿರ್ಣಯಕ್ಕೆ ಅಮೆರಿಕ ವೀಟೊ ಪ್ರಯೋಗಿಸಿದೆ. ಕದನ ವಿರಾಮಕ್ಕೆ ಆಗ್ರಹಿಸುವ ನಿರ್ಣಯದಲ್ಲಿ ಒತ್ತೆಯಾಳುಗಳ ಬಿಡುಗಡೆ ಷರತ್ತನ್ನು ಸೇರಿಸಬೇಕು ಎಂದು ಅಮೆರಿಕ ಪಟ್ಟುಹಿಡಿದಿದೆ. ಇದೀಗ ಚೆಂಡು ಹಮಾಸ್ ಅಂಗಣದಲ್ಲಿದೆ. ಅವರು ಪ್ರಸ್ತಾವನೆಯನ್ನು ಒಪ್ಪಿದರೆ ಕದನ ವಿರಾಮದ ಮಾತುಕತೆ ಯಶಸ್ವಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಹೇಳಿದ್ದಾರೆ.