ಕೆರೆಮ್ ಶಲೋಮ್ ಮೂಲಕ ಗಾಝಾಕ್ಕೆ ನೆರವು ಪೂರೈಸಲು ಅಮೆರಿಕ, ಈಜಿಪ್ಟ್ ಒಪ್ಪಿಗೆ
ವಾಷಿಂಗ್ಟನ್: ವಿಶ್ವಸಂಸ್ಥೆ ಒದಗಿಸುವ ಮಾನವೀಯ ನೆರವನ್ನು ಕೆರೆಮ್ ಶಾಲೊಮ್ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಮೂಲಕ ರಫಾ ನಗರವನ್ನು ತಲುಪಿಸುವ ತಾತ್ಕಾಲಿಕ ವ್ಯವಸ್ಥೆಗೆ ಈಜಿಪ್ಟ್ ನ ಬದ್ಧತೆಯನ್ನು ಸ್ವಾಗತಿಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ ಜತೆ ದೂರವಾಣಿಯಲ್ಲಿ ಮಾತನಾಡಿದ ಬೈಡನ್, ಇಸ್ರೇಲ್ ಮತ್ತು ಈಜಿಪ್ಟ್ ಎರಡಕ್ಕೂ ಸ್ವೀಕಾರಾರ್ಹ ಕರಾರುಗಳ ಅಡಿಯಲ್ಲಿ ದಕ್ಷಿಣ ರಫಾ ಗಡಿದಾಟನ್ನು ಮತ್ತೆ ತೆರೆಯಲು ಈಜಿಪ್ಟ್ ನಡೆಸುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮುಂದಿನ ವಾರ ಅಮೆರಿಕದ ಉನ್ನತ ಮಟ್ಟದ ತಂಡವೊಂದು ಈಜಿಪ್ಟ್ ಗೆ ಭೇಟಿ ನೀಡಿ ಮಾತುಕತೆ ನಡೆಸಲಿದೆ ಎಂದೂ ಬೈಡನ್ ಹೇಳಿರುವುದಾಗಿ ಶ್ವೇತಭವನದ ಹೇಳಿಕೆ ತಿಳಿಸಿದೆ. ಫೆಲೆಸ್ತೀನ್ ಬದಿಯ ರಫಾ ಗಡಿದಾಟನ್ನು ಮತ್ತೆ ತೆರೆಯುವವರೆಗೆ, ತಾತ್ಕಾಲಿಕ ವ್ಯವಸ್ಥೆಯಡಿ ರಫಾಕ್ಕೆ ಅಂತರಾಷ್ಟ್ರೀಯ ನೆರವು ಒದಗಿಸುವ ವ್ಯವಸ್ಥೆಗೆ ತನ್ನ ಸಮ್ಮತಿಯಿದೆ ಎಂದು ಈಜಿಪ್ಟ್ ಹೇಳಿದೆ. ಇದರನ್ವಯ, ಈಜಿಪ್ಟ್ ಗಡಿಭಾಗದಲ್ಲಿ ಬಾಕಿ ಉಳಿದಿದ್ದ ನೆರವು ಪೂರೈಕೆ ಟ್ರಕ್‍ಗಳು ಗಾಝಾ ಪಟ್ಟಿಯತ್ತ ಪ್ರಯಾಣಕ್ಕೆ ಸಿದ್ಧಗೊಂಡಿವೆ ಎಂದು ಈಜಿಪ್ಟ್ ಸರಕಾರದ ಮೂಲಗಳು ಮಾಹಿತಿ ನೀಡಿವೆ.