ಚೀನಾ ಪರ ಗೂಢಚಾರಿಕೆ: ಅಮೆರಿಕದ ನೌಕಾಧಿಕಾರಿಗೆ ಜೈಲುಶಿಕ್ಷೆ
ನ್ಯೂಯಾರ್ಕ್: ಮಹತ್ವದ ಮಿಲಿಟರಿ ಮಾಹಿತಿಗಳನ್ನು ಚೀನಾದ ಗುಪ್ತಚರ ಅಧಿಕಾರಿಗೆ ಒದಗಿಸುತ್ತಿದ್ದ ಪ್ರಕರಣದಲ್ಲಿ ಅಮೆರಿಕ ನೌಕಾಸೇನೆಯ ಅಧಿಕಾರಿಗೆ 27 ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಅಮೆರಿಕ ನ್ಯಾಯ ಇಲಾಖೆ ಹೇಳಿದೆ.
ಚೀನಾ ಪರ ಗೂಢಚಾರಿಕೆ ನಡೆಸುತ್ತಿದ್ದ ಶಂಕೆಯಲ್ಲಿ ಅಮೆರಿಕ ನೌಕಾಸೇನೆಯ ಅಧಿಕಾರಿಗಳಾದ ವೆನ್ಹೆಂಗ್ ಝಾವೊ ಹಾಗೂ ಜಿಂಚಾವೊ ವೆಯಿಯನ್ನು ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಲಾಸ್ ಏಂಜಲೀಸ್ ನ ನೌಕಾನೆಲೆಯಲ್ಲಿ ಅಧಿಕಾರಿಯಾಗಿದ್ದ ವೆನ್ಹೆಂಗ್ ಝಾವೊ 2021ರ ಆಗಸ್ಟ್ ನಿಂದ 2023ರ ಮೇ ತಿಂಗಳಿನ ನಡುವಿನ ಅವಧಿಯಲ್ಲಿ ಚೀನಾದ ಗುಪ್ತಚರ ಅಧಿಕಾರಿಯಿಂದ ಸುಮಾರು 15,000 ಡಾಲರ್ ಹಣ ಪಡೆದು ಸೂಕ್ಷ್ಮ ಮತ್ತು ಮಹತ್ವದ ದಾಖಲೆಗಳನ್ನು ಹಸ್ತಾಂತರಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಫೆಡರಲ್ ಕೋರ್ಟ್ ವೆನ್ಹೆಂಗ್ ಝಾವೊ ಮೇಲಿದ್ದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 27 ತಿಂಗಳ ಜೈಲುಶಿಕ್ಷೆ ಮತ್ತು 5,500 ಡಾಲರ್ ದಂಡ ವಿಧಿಸಿದೆ ಎಂದು ವರದಿಯಾಗಿದೆ.