ಉಕ್ರೇನ್ ನಲ್ಲಿ ಮೂರು ನಿಯಂತ್ರಣ ವಲಯ: ಅಮೆರಿಕ ಪ್ರಸ್ತಾವನೆ

ಲಂಡನ್: ಉಕ್ರೇನ್ ಮತ್ತು ರಶ್ಯ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಅಮೆರಿಕ ಸಂಭಾವ್ಯ ಪರಿಹಾರವನ್ನು ಪ್ರಸ್ತಾವಿಸಿದೆ. ಇದರ ಪ್ರಕಾರ, ಎರಡನೇ ವಿಶ್ವಯುದ್ಧದ ನಂತರದ ಬರ್ಲಿನ್ ನಂತೆಯೇ ಉಕ್ರೇನ್ ಅನ್ನು ನಿಯಂತ್ರಣ ವಲಯಗಳಾಗಿ ವಿಂಗಡಿಸಬಹುದು ಎಂದು `ದಿ ಟೈಮ್ಸ್ ಆಫ್ ಲಂಡನ್' ವರದಿ ಮಾಡಿದೆ.
ಉಕ್ರೇನ್ ಗೆ ಅಮೆರಿಕದ ವಿಶೇಷ ರಾಯಭಾರಿ ಜ| ಕೀಥ್ ಕೆಲ್ಲೋಗ್ ಮುಂದಿರಿಸಿದ ಪ್ರಸ್ತಾಪದ ಪ್ರಕಾರ, ಕದನ ವಿರಾಮದ ಬಳಿಕ ಪಶ್ಚಿಮ ಉಕ್ರೇನ್ ನಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಪಡೆಗಳು `ಭರವಸೆ ನೀಡುವ' ಪಡೆಗಳಾಗಿ ಕಾರ್ಯನಿರ್ವಹಿಸಬಹುದು. ರಶ್ಯದ ಪಡೆಗಳು ತಾವು ಆಕ್ರಮಿಸಿಕೊಂಡಿರುವ ಪೂರ್ವ ವಲಯದ ಮೇಲೆ ಹಿಡಿತ ಸಾಧಿಸುತ್ತವೆ. `ಮಿಲಿಟರಿ ರಹಿತ' ವಲಯ ಹಾಗೂ ಉಕ್ರೇನ್ ನ ಪಡೆಗಳು ಎರಡೂ ಪಡೆಗಳನ್ನು(ರಶ್ಯ- ಬ್ರಿಟನ್, ಫ್ರಾನ್ಸ್) ಪ್ರತ್ಯೇಕಿಸುತ್ತವೆ. ಕೀಥ್ ಕೆಲ್ಲೋಗ್ ತನ್ನ ಪ್ರಸ್ತಾಪ ಹಾಗೂ ಎರಡನೇ ವಿಶ್ವಯುದ್ಧದ ಬಳಿಕ ಬರ್ಲಿನ್ ನ ವಿಭಜನೆಯ ನಡುವೆ ಹೋಲಿಕೆ ಮಾಡಿದ್ದು ` ಎರಡನೇ ವಿಶ್ವಯುದ್ಧದ ಬಳಿಕ ಬರ್ಲಿನ್ ನಲ್ಲಿ ಏನಾಯಿತು ಎಂಬುದನ್ನು ಗಮನಿಸಬಹುದು. ಅಲ್ಲಿ ರಶ್ಯನ್ ವಲಯ, ಫ್ರಾನ್ಸ್ ವಲಯ, ಬ್ರಿಟನ್ ವಲಯ ಹಾಗೂ ಅಮೆರಿಕನ್ ವಲಯಗಳಿದ್ದವು' ಎಂದು ಹೇಳಿರುವುದಾಗಿ ವರದಿಯಾಗಿದೆ.
ಆದರೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿರುವ ಕೆಲ್ಲೋಗ್ `ತನ್ನ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಯುದ್ಧ ವಿರಾಮದ ಬಳಿಕ ಉಕ್ರೇನ್ ನ ಸಾರ್ವಭೌಮತ್ವವನ್ನು ಬೆಂಬಲಿಸುವ ಪಡೆಗಳ ಬಗ್ಗೆ ಚರ್ಚಿಸಿದ್ದೇನೆ, ಉಕ್ರೇನ್ ನ ವಿಭಜನೆಯ ಕುರಿತು ಅಲ್ಲ. ಕೆಲವು ವಲಯಗಳ ಜವಾಬ್ದಾರಿಯನ್ನು ಮಿತ್ರ ಪಡೆಗಳಿಗೆ ವಹಿಸಿಕೊಡುವ ಪ್ರಸ್ತಾಪ ಮಾಡಿದ್ದೇನೆ' ಎಂದಿದ್ದಾರೆ.
ಉಕ್ರೇನ್ ನ ಪ್ರಾಂತಗಳನ್ನು ರಶ್ಯಕ್ಕೆ ಬಿಟ್ಟುಕೊಡುವುದನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಈಗಾಗಲೇ ದೃಢವಾಗಿ ತಿರಸ್ಕರಿಸಿದ್ದು, ಭೂಮಿಯನ್ನು ಬಿಟ್ಟುಕೊಡುವ ಷರತ್ತುಗಳನ್ನು ಹೊಂದಿರುವ ಕದನ ವಿರಾಮ ಪ್ರಸ್ತಾಪವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಉಕ್ರೇನ್ 2014ರ ಹಿಂದಿನ ಗಡಿಯ ಸ್ಥಿತಿಗೆ ಹಿಂದಿರುಗುವುದನ್ನು ನಿರೀಕ್ಷಿಸುವುದು ಅವಾಸ್ತವಿಕ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲೂ ಉಕ್ರೇನ್ ನಲ್ಲಿ ಯಾವುದೇ ನೇಟೊ ದೇಶಗಳ ಶಾಂತಿ ಪಾಲನಾ ಪಡೆಯನ್ನು ರಶ್ಯ ಸ್ವೀಕರಿಸುವುದಿಲ್ಲ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಅಮೆರಿಕದ ಮತ್ತೊಬ್ಬ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ರಶ್ಯದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ 4 ಗಂಟೆ ಮಾತುಕತೆ ನಡೆಸಿದ್ದು ಕದನ ವಿರಾಮ ಒಪ್ಪಂದದ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆಯಲ್ಲಿ ಉಕ್ರೇನ್ ಪ್ರತಿನಿಧಿಗಳು ಭಾಗವಹಿಸದಿದ್ದರೆ ಅದನ್ನು ತಾನು ಒಪ್ಪುವುದಿಲ್ಲ ಎಂಬ ಝೆಲೆನ್ಸ್ಕಿ ಹೇಳಿಕೆಯ ಹೊರತಾಗಿಯೂ ಈ ಮಾತುಕತೆಯಲ್ಲಿ ಉಕ್ರೇನ್ ಪ್ರತಿನಿಧಿಯನ್ನು ಆಹ್ವಾನಿಸಲಾಗಿಲ್ಲ ಎಂದು ವರದಿಯಾಗಿದೆ.
ಯುದ್ಧರಂಗದಲ್ಲಿ ಕಳೆದ ಕೆಲ ದಿನಗಳಿಂದ ರಶ್ಯದ ಪಡೆಗಳು ಮುನ್ನಡೆ ಸಾಧಿಸುತ್ತಿರುವುದರಿಂದ ಕದನ ವಿರಾಮ ಮಾತುಕತೆಯಲ್ಲಿ ಷರತ್ತನ್ನು ಮುಂದಿರಿಸುವ ಆಯ್ಕೆಯನ್ನು ಉಕ್ರೇನ್ ಕ್ರಮೇಣ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ್ಲೋಗ್ ಅವರ ಪಸ್ತಾಪ ಗಮನಾರ್ಹ ಪ್ರಾಮುಖ್ಯತೆ ಪಡೆಯುತ್ತದೆ. ಕದನ ವಿರಾಮದ ಬಳಿಕ ದ್ನಿಪ್ರೋ ನದಿಯನ್ನು ಉಕ್ರೇನ್ ನೊಳಗೆ ಗಡಿರೇಖೆಯ ರೇಖೆಯಾಗಿ ಬಳಸುವುದು ಪ್ರಸ್ತಾವನೆಯ ಪ್ರಮುಖ ಅಂಶವಾಗಿದೆ. ಆದರೆ ಈ ಯೋಜನೆಯ ಹೆಚ್ಚಿನ ವಿವರ ಸ್ಪಷ್ಟವಾಗಿಲ್ಲ ಎಂದು `ಟೈಮ್ಸ್ ಆಫ್ ಲಂಡನ್' ವರದಿ ಹೇಳಿದೆ.
ಉಕ್ರೇನ್ ನಲ್ಲಿ ಹೊಸ ಚುನಾವಣೆಗೆ ಅಮೆರಿಕ ಬೆಂಬಲ ನೀಡುತ್ತದೆ ಎಂಬ ಅಂಶವೂ ಗಮನಾರ್ಹವಾಗಿದೆ. ಝೆಲೆನ್ಸ್ಕಿಯ ಅಧ್ಯಕ್ಷತೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ರಶ್ಯ ಅಧ್ಯಕ್ಷ ಪುಟಿನ್ ರನ್ನು ಮಾತುಕತೆಗೆ ಕರೆತರುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.