ನೀತಿ ಸಂಹಿತೆ ಉಲ್ಲಂಘನೆ | ಥೈಲ್ಯಾಂಡ್ ಪ್ರಧಾನಿ ವಜಾ
ಬ್ಯಾಂಕಾಕ್ : ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಥೈಲ್ಯಾಂಡ್ ಪ್ರಧಾನಿ ಶ್ರೇತ್ತಾ ಥವಿಸಿನ್ ದೋಷಿ ಎಂದು ತೀರ್ಪಿತ್ತಿರುವ ಸಾಂವಿಧಾನಿಕ ನ್ಯಾಯಾಲಯ, ಪ್ರಧಾನಿಯನ್ನು ಹುದ್ದೆಯಿಂದ ವಜಾಗೊಳಿಸಿದೆ.
`ಪ್ರಧಾನಿ ತಮ್ಮ ಕ್ಯಾಬಿನೆಟ್ಗೆ ಕ್ರಿಮಿನಲ್ ಅಪರಾಧ ಹೊಂದಿರುವ ವಕೀಲರನ್ನು ನೇಮಿಸಿಕೊಳ್ಳುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಸಚಿವರನ್ನು ನೇಮಿಸುವಾಗ ಅವರು ಪ್ರಾಮಾಣಿಕತೆಯನ್ನು ತೋರಿಲ್ಲ. ವಕೀಲ ಪಿಚಿತ್ ಚುಯೆಂಬಾನ್ರ 2008ರ ಶಿಕ್ಷೆಯ ಬಗ್ಗೆ ಪ್ರಧಾನಿಗೆ ಮಾಹಿತಿ ಇರಬೇಕಿತ್ತು' ಎಂದು ನ್ಯಾಯಪೀಠ 5-4ರ ಬಹುಮತದ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಥವಿಸಿನ್ ಪ್ರತಿಕ್ರಿಯಿಸಿದ್ದಾರೆ.
ಥೈಲ್ಯಾಂಡ್ನ ಮಾಜಿ ಸೇನಾಡಳಿತ ನೇಮಿಸಿದ್ದ ಮಾಜಿ ಸೆನೆಟರ್ ಗಳ ಗುಂಪೊಂದು ಪ್ರಧಾನಿ ಥವಿಸಿನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ವಾರದ ಮುನ್ನ ಇದೇ ನ್ಯಾಯಾಲಯವು ಪ್ರಮುಖ ವಿರೋಧ ಪಕ್ಷ `ಮೂವ್ ಫಾರ್ವರ್ಡ್ ಪಾರ್ಟಿ'ಯನ್ನು ವಿಸರ್ಜಿಸಿ ಅದರ ಮಾಜಿ ನಾಯಕನನ್ನು ರಾಜಕೀಯದಿಂದ 10 ವರ್ಷ ನಿಷೇಧಿಸಿತ್ತು. ಪ್ರಧಾನಿಯಾಗಿ ನೇಮಕಗೊಂಡ 1 ವರ್ಷಕ್ಕೂ ಮೊದಲೇ ಥಸಿವಿನ್ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಥಸಿವಿನ್ ಜತೆಗೆ ಅವರ ಸಚಿವ ಸಂಪುಟವನ್ನೂ ನ್ಯಾಯಾಲಯ ವಜಾಗೊಳಿಸಿದ್ದು ಇದೀಗ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಸಂಸತ್ ಸಭೆ ಸೇರಲಿದೆ.