ಮಧ್ಯಪ್ರಾಚ್ಯದ ಸ್ಥಿರತೆಗೆ ನೆರವಾಗಲು ಈಜಿಪ್ಟ್ ಜತೆ ಕಾರ್ಯನಿರ್ವಹಣೆ: ಜಿಂಪಿಂಗ್

Update: 2023-10-19 17:47 GMT

.ಕ್ಸಿಜಿಂಪಿಂಗ್ | Photo: PTI

ಬೀಜಿಂಗ್: ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಸ್ಥಿರತೆ ತರುವ ನಿಟ್ಟಿನಲ್ಲಿ ಚೀನಾವು ಈಜಿಪ್ಟ್ ಜತೆ ಕಾರ್ಯ ನಿರ್ವಹಿಸಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಗುರುವಾರ ಹೇಳಿದ್ದಾರೆ.

ಚೀನಾಕ್ಕೆ ಭೇಟಿ ನೀಡಿರುವ ಈಜಿಪ್ಟ್ ಪ್ರಧಾನಿ ಮುಸ್ತಫಾ ಮದ್‍ಬೌಲಿ ಜತೆಗಿನ ಮಾತುಕತೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಂಪಿಂಗ್ ` ಈಜಿಪ್ಟ್ ನೊಂದಿಗೆ ಸಹಕಾರವನ್ನು ಹೆಚ್ಚಿಸಲು , ಈ ಪ್ರದೇಶ ಮತ್ತು ಪ್ರಪಂಚಕ್ಕೆ ಹೆಚ್ಚು ಸ್ಥಿರತೆ ಹಾಗೂ ಖಚಿತತೆಯನ್ನು ಪರಿಚಯಿಸಲು ಚೀನಾ ಸಿದ್ಧವಾಗಿದೆ' ಎಂದು ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಸಿಸಿಟಿವಿ ವಾಹಿನಿ ವರದಿ ಮಾಡಿದೆ.

`ಚೀನಾ ಮತ್ತು ಈಜಿಪ್ಟ್ ಒಂದೇ ಗುರಿಯನ್ನು ಹಂಚಿಕೊಳ್ಳುವ, ಪರಸ್ಪರರ ಮೇಲೆ ವಿಶ್ವಾಸ ಹೊಂದಿರುವ ಉತ್ತಮ ಸ್ನೇಹಿತರು, ಅಭಿವೃದ್ಧಿ ಮತ್ತು ಸಾಮಾನ್ಯ ಸಮೃದ್ಧಿಗಾಗಿ ಕೈಜೋಡಿಸಿ ಕೆಲಸ ಮಾಡುವ ಉತ್ತಮ ಪಾಲುದಾರರು. ಪ್ರಸ್ತುತ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಪರಿಸ್ಥಿತಿಯು ಆಳವಾದ ಮತ್ತು ಸಂಕೀರ್ಣ ಬದಲಾವಣೆಗೆ ಒಳಗಾಗುತ್ತಿದೆ. ಮತ್ತು ಪ್ರಪಂಚವು ಶತಮಾನಗಳಿಂದ ಕಾಣದ ತ್ವರಿತ ಬದಲಾವಣೆಯನ್ನು ಅನುಭವಿಸುತ್ತಿದೆ. ಅಂತರಾಷ್ಟ್ರೀಯ ನ್ಯಾಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಮಾನ್ಯ ಹಿತಾಸಕ್ತಿಗಳ ರಕ್ಷಣೆಗಾಗಿ ಚೀನಾ ಮತ್ತು ಈಜಿಪ್ಟ್ ಕೈಜೋಡಿಸಲಿದೆ' ಎಂದು ಜಿಂಪಿಂಗ್ ಹೇಳಿದ್ದಾರೆ.

ಈಜಿಪ್ಟ್ `ಬ್ರಿಕ್ಸ್' ಗುಂಪಿನ ಅಧಿಕೃತ ಸದಸ್ಯತ್ವ ಪಡೆಯುವುದು ಖಚಿತವಾಗಿರುವಂತೆಯೇ ಚೀನಾ ಮತ್ತು ಈಜಿಪ್ಟ್ ನಡುವಿನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಸದೃಢಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News