ರಶ್ಯದಿಂದ ಈಸ್ಟರ್ ಕದನ ವಿರಾಮ ಉಲ್ಲಂಘನೆ: ಝೆಲೆನ್ಸ್ಕಿ ಆರೋಪ
ವ್ಲಾದಿಮಿರ್ ಪುಟಿನ್ / ವೊಲೊದಿಮಿರ್ ಝೆಲೆನ್ಸ್ಕಿ (PTI)
ಕೀವ್: ರಶ್ಯ ಅಧ್ಯಕ್ಷ ಪುಟಿನ್ ಘೋಷಿಸಿರುವ ಈಸ್ಟರ್ ಕದನ ವಿರಾಮವನ್ನು ನಾವು ಬೆಂಬಲಿಸುತ್ತೇವೆ. ಆದರೆ ರಶ್ಯದ ಪಡೆಯೇ ಅದನ್ನು ಉಲ್ಲಂಘಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಈಸ್ಟರ್ ಹಿನ್ನೆಲೆಯಲ್ಲಿ ಶನಿವಾರ(ಎಪ್ರಿಲ್ 19) ಸಂಜೆ 6 ಗಂಟೆಯಿಂದ (ರಶ್ಯ ಕಾಲಮಾನ) ರವಿವಾರ ಮಧ್ಯರಾತ್ರಿಯವರೆಗೆ ಉಕ್ರೇನ್ ನಲ್ಲಿ ಕದನ ವಿರಾಮ ಜಾರಿಯಲ್ಲಿರುತ್ತದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಘೋಷಿಸಿದ್ದರು. 3 ವರ್ಷದಿಂದ ಮುಂದುವರಿದಿರುವ ಸಂಘರ್ಷದಲ್ಲಿ 30 ಗಂಟೆಗಳ ಒಪ್ಪಂದವು ಮಹತ್ವದ ವಿರಾಮವಾಗಿದೆ. ಆದರೆ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಮುಂಚೂಣಿಯಲ್ಲಿರುವ ರಶ್ಯದ ಫಿರಂಗಿ ಪಡೆ ಗುಂಡಿನ ದಾಳಿ ನಡೆಸಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಈಗ ರಶ್ಯ ಏಕಾಏಕಿ ಪೂರ್ಣಪ್ರಮಾಣದ ಮತ್ತು ಬೇಷರತ್ತಾದ ಕದನ ವಿರಾಮದ ಬಗ್ಗೆ ನಿಜವಾಗಿಯೂ ತೊಡಗಿಸಿಕೊಳ್ಳಲು ಸಿದ್ಧವಿದ್ದರೆ ಉಕ್ರೇನ್ ಇದೇ ರೀತಿ ವರ್ತಿಸಲಿದೆ. ಎಪ್ರಿಲ್ 20ರ ನಂತರವೂ ಕದನ ವಿರಾಮ ಮುಂದುವರಿಯಲಿ ಎಂಬುದು ನಮ್ಮ ಆಶಯ. 30 ದಿನಗಳ ಕದನ ವಿರಾಮಕ್ಕೆ ಒಂದು ಅವಕಾಶ ದೊರಕಬೇಕು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.