ವಕ್ಫ್ ತಿದ್ದುಪಡಿ ವಿರೋಧಿ ಹೋರಾಟದಲ್ಲಿ ಭಾಗಿ ಆರೋಪ; ಬಿಜೆಪಿಯಿಂದ ರೌಫುದ್ದೀನ್ ಕಚೇರಿವಾಲೆ ಉಚ್ಛಾಟನೆ

ಬೀದರ್ : ವಕ್ಫ್ ಕಾಯಿದೆ ತಿದ್ದುಪಡಿ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಕಾರಣ ನೀಡಿ ಅವರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರೌಫುದ್ದೀನ್ ಕಚೇರಿವಾಲೆ ಅವರನ್ನು ಬಿಜೆಪಿಯು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.
ರಾಜ್ಯ ಹಜ್ ಕಮಿಟಿಯ ಮಾಜಿ ಅಧ್ಯಕ್ಷರಾಗಿದ್ದ ಇವರು ಕಾಂಗ್ರೆಸ್ ಹಾಗೂ ಕೆಲ ಮುಸ್ಲಿಂ ಮುಖಂಡರ ಜೊತೆಗೂಡಿ ಕಪ್ಪು ಪಟ್ಟಿ ಧರಿಸಿ ವಕ್ಫ್ ಕಾಯಿದೆ ತಿದ್ದುಪಡಿ ವಿರೋಧದ ಹೋರಾಟದಲ್ಲಿ ಅವರು ಭಾಗಿಯಾಗಿದ್ದರು. ಇದಕ್ಕೆ ಕಾರಣ ಕೇಳಿ ಬಿಜೆಪಿ ಪಕ್ಷವು ಅವರಿಗೆ ನೋಟಿಸ್ ಕೂಡ ನೀಡಿತ್ತು.
ಬಿಜೆಪಿಯಿಂದ ನೀಡಿರುವ ನೋಟಿಸ್ ಗೆ ಅವರು ಸ್ಪಷ್ಟಿಕರಣ ನೀಡಿರಲಿಲ್ಲ. ಇದರಿಂದಾಗಿ ರೌಫುದ್ದೀನ್ ಕಚೇರಿವಾಲೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಎಲ್ಲ ರೀತಿಯ ಜವಾಬ್ದಾರಿಗಳಿಂದ ಮುಕ್ತಗೊಳಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಪತ್ರದ ಮೂಲಕ ತಿಳಿಸಿದ್ದಾರೆ.