ಅನುಭವ ಮಂಟಪ ರಥಕ್ಕೆ ಕಲಬುರಗಿ ನಗರದಲ್ಲಿ ಭವ್ಯ ಸ್ವಾಗತ

ಕಲಬುರಗಿ : ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಎ.29 ಮತ್ತು 30 ರಂದು ಎರಡು ದಿನಗಳ ಕಾಲ "ಅನುಭವ ಮಂಟಪ-ಬಸವಾದಿ ಶರಣರ ವೈಭವ" ಕಾರ್ಯಕ್ರಮ ಆಯೋಜಿಸಿದ ಪ್ರಯುಕ್ತ ಈ ಬಗ್ಗೆ ನಾಡಿನಾದ್ಯಂತ ವ್ಯಾಪಕ ಪ್ರಚಾರಪಡಿಸಲು ಹೊರಟಿರುವ ರಥಯಾತ್ರೆಯು ಗುರುವಾರ ಸಂಜೆ ಬೀದರ್‌ನಿಂದ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಜಗತ್ ವೃತ್ತದಲ್ಲಿ ಜಿಲ್ಲಾಡಳಿತದಿಂದ ಭವ್ಯ ಸ್ವಾಗತ ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿದಲ್ಲದೆ ಬಸವಣ್ಣ ಸೇರಿದಂತೆ ರಥದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಯೇಸು ಕ್ರಿಸ್ತ, ನಾರಾಯಣ ಗುರು, ಶಿವಶರಣೆ ಅಕ್ಕ ಮಹಾದೇವಿ, ಬುದ್ಧ, ಸಂತ ಶಿಸುನಾಳ ಶರೀಫ್, ಗುರುನಾನಕ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಡೊಳ್ಳು,ಲಂಬಾಣಿ ನೃತ್ಯ ಮೂಲಕ ವರ್ಣರಂಜಿತವಾಗಿ ರಥವನ್ನು ಬರಮಾಡಿಕೊಳ್ಳಲಾಯಿತು.
ವಿಧಾನ ಪರಿಷತ್ ಮಾಜಿ ಶಾಸಕ ಅಮರನಾಥ ಪಾಟೀಲ್, ಕಲಬುರಗಿ ತಹಶೀಲ್ದಾರ್ ಕೆ.ಆನಂದಶೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ರಾಷ್ಟ್ರೀಯ ಬಸವದಳ ಘಟಕದ ಜಿಲ್ಲಾಧ್ಯಕ್ಷ ಆರ್.ಜಿ.ಶೆಟಗಾರ, ಪ್ರಮುಖರಾದ ಡಾ.ಸುಧಾ ಹಾಲಕಾಯಿ, ರಾಜಶೇಖರ್ ಯಂಕಂಚಿ, ಶಾಂತಪ್ಪ ಪಾಟೀಲ, ರವೀಂದ್ರ ಶಾಬಾದಿ, ಅಶೋಕ ಗೂಳಿ, ಮನೋಹರ ಜೀವಣಗಿ, ಪ್ರಭುಲಿಂಗ ಮಹಾಗಾಂವಕರ್, ಎಸ್.ಸಿ-ಎಸ್.ಟಿ ನೌಕರರ ಸಂಧದ ರಾಜ್ಯಾಧ್ಯಕ್ಷ ಮಹೇಶ ಹುಬ್ಳಿ ಸೇರಿದಂತೆ ಬಸವಾದಿ ಶರಣರ ಅನುಯಾಯಿಗಳು ಇದ್ದರು.
ನಂತರ ರಥವು ಜೇವರ್ಗಿ ಮಾರ್ಗವಾಗಿ ವಿಜಯಪುರ ಜಿಲ್ಲೆಗೆ ತನ್ನ ಮುಂದಿನ ಪಯಣ ಆರಂಭಿಸಿತ್ತು.