ಎಪ್ರಿಲ್ 29ರಂದು ವಚನ ಸಾಂಸ್ಕೃತಿಕ ಸಂಭ್ರಮದ ಬಸವ ಉತ್ಸವ: ವಿಜಯಕುಮಾರ ತೆಗಲತಿಪ್ಪಿ

ಕಲಬುರಗಿ: ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ-ವಿಶ್ವಗುರು ಬಸವಣ್ಣ ನವರ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಸವ ಉತ್ಸವ-2015 ಹಾಗೂ ವಚನ ಸಾಂಸ್ಕೃತಿಕ ಸಂಭ್ರಮ ಸೇರಿ ಅನೇಕ ವೈವಿಧ್ಯಮಯ ವೈಚಾರಿಕ ಕಾರ್ಯಕ್ರಮಗಳು ಇದೇ 28 ಮತ್ತು 29 ರಂದು ನಗರದ ಕನ್ನಡ ಭವನದಲ್ಲಿ ಜರುಗಲಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಧಶ್ರದ್ಧೆ ವಿರುದ್ಧ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಧ್ವನಿ ಎತ್ತಿ ಜನರಲ್ಲಿ ಜ್ಞಾನದ ಬೆಳಕು ನೀಡಿದ ಮಹಾ ಮಾನವತಾವಾದಿ ಬಸವಣ್ಣನವರಾಗಿದ್ದಾರೆ. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳ ವಿರುದ್ಧ ಬಸವಣ್ಣನವರ ಸಾರಥ್ಯದಲ್ಲಿ ಬಹುದೊಡ್ಡ ವೈಚಾರಿಕ ಕ್ರಾಂತಿ ಕಲ್ಯಾಣ ನೆಲದಲ್ಲಿ ನಡೆಯಿತು. ಬಸವಣ್ಣನವರ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.
ಕಾಯಕ ತತ್ವ, ದಾಸೋಹ ತತ್ವ, ಬಸವ ತತ್ವದಿಂದ ದೇಶದ ಉದ್ಧಾರ ಸಾಧ್ಯ. ಇಂಥ ತತ್ವಗಳನ್ನು ಇಂದು ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಿ, ಪ್ರತಿಯೊಬ್ಬರ ಮನೆ-ಮನಗಳಿಗೆ ಮುಟ್ಟಿಸುವ ಪ್ರಯತ್ನ ಪರಿಷತ್ ನಿಂದ ನಡೆಯುತ್ತಿದೆ ಎಂದು ಎಂದರು.
ಇತ್ತೀಚಿನ ದಿನಗಳಲ್ಲಿ ಜನರು ಆಡಂಬರದ ಬದುಕಿಗೆ ಹೆಚ್ಚು ಒತ್ತು ನೀಡುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ, ಬಸವಣ್ಣನವರ ಸಾಹಿತ್ಯವನ್ನು ಓದಿ ಜೀವನವನ್ನು ಸರಳ ಮಾಡಿಕೊಳ್ಳಬೇಕಾಗಿದೆ. ಆ ಪ್ರಯುಕ್ತ ಈ ಕಾರ್ಯಕ್ರಮ ವೈಚಾರಿಕತೆಯ ಮಾರ್ಗದೆಡೆಗೆ ಕೊಂಡೊಯ್ಯಲಿದೆ ಎಂದು ಆಶಿಸಿದರು.
28ರಂದು ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ವಚನಾಧಾರಿತ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದು, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಕೋಟೆ ಉದ್ಘಾಟಿಸಲಿದ್ದು, ಅಧ್ಯಕ್ಷತೆ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ವಹಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಹಿರಿಯ ಚಿತ್ರಕಲಾ ಡಾ. ಎ.ಎಸ್. ಪಾಟೀಲ, ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಸಮಾಜ ಸೇವಕಿ ಶ್ವೇತಾ ಸಿಂಗ್ ಅತಿಥಿಗಳಾಗಿ ಆಗಮಿಸುವರು. ಗುಲಬರ್ಗ ನ್ಯಾಯವಾದಿಗಳ ಸಂಘಕ್ಕೆ ಚುನಾಯಿತರಾದ ನೂತನ ಪದಾಧಿಕಾರಿಗಳಿಗೆ ವಿಶೇಷ ಸತ್ಕಾರ ಹಮ್ಮಿಕೊಳ್ಳಲಾಗಿದೆ.
29 ರಂದು ಬೆಳಗ್ಗೆ 11.15 ಕ್ಕೆ ಕನ್ನಡ ಭವನದಲ್ಲಿ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಬಸವ ಉತ್ಸವ-2025ಕ್ಕೆ ವೈದ್ಯ ಸೇವಕಿ ಡಾ. ಪ್ರತಿಮಾ ಎಸ್ ಕಾಮರೆಡ್ಡಿ ಚಾಲನೆ ನೀಡಲಿದ್ದು, ವಿನೋದ ಪಾಟೀಲ ಸರಡಗಿ, ಮಲ್ಲಣ್ಣ ಮಡಿವಾಳ, ಡಾ. ಕಿರಣ ದೇಶಮುಖ, ಬಾಬು ಮೌರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಸವಾದಿ ಶರಣ ಆಶಯಕ್ಕೆ ತಕ್ಕಂತೆ ಹೆಣ್ಣಿಗೆ ಗೌರವ ಕೊಡುವ ನಿಟ್ಟಿನಲ್ಲಿ ವಿಧವಾ ತಾಯಂದಿಯರಿಗೆ ಉಡಿ ತುಂಬುವ ಪಕ್ಕಾ ವೈಚಾರಿಕ ಐತಿಹಾಸಿಕ ಕಲ್ಯಾಣ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ. ಇದು ಪರಿಷತ್ ಇತಿಹಾಸದಲ್ಲೇ ಇದು ಮೊದಲ ಕಾರ್ಯಕ್ರಮ ಎಂಬುದು ವಿಶೇಷ ಎಂದಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಜೀವ ಗುಪ್ತಾ, ಶಶಿಕಾಂತ ಹೊಳಕರ್, ಬಸಲಿಂಗಪ್ಪ ಆಲ್ಹಾಳ, ಬಸವರಾಜ ಮೊರಬದ, ಡಾ. ಅರುಣಕುಮಾರ ಲಗಶೆಟ್ಟಿ, ಸೋಮು ಕುಂಬಾರ, ಶರಣು ಶೆಟ್ಟಿ, ಹಣಮಂತರಾವ ಪೆಂಚನಪಳ್ಳಿ, ಸಿದ್ಧರೂಢ ಮೂಲಗೆ ದಂಪತಿಗಳನ್ನು ಬಸವ ಭೂಷಣ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೀವನ ನೈತ್ಯಾನಿಕೇತನ ಸಂಸ್ಥೆಯ ಮಕ್ಕಳು, ಆವಂತಿಕಾ ಬಿ. ಘಂಟೆ, ಅಮೃತಪ್ಪ ಅಣೂರ ಕವಿಗಳು, ಬಾಬುರಾವ ಪಾಟೀಲ ಸೇರಿ ಅನೇಕ ಕಲಾವಿದರಿಂದ ವಚನ ಸಾಂಸ್ಕೃತಿಕ ವೈಭವ ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ದ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಸಿದ್ಧಲಿಂಗ ಜಿ ಬಾಳಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂದಿ, ದಿನೇಶ ಮದಕರಿ ಮತ್ತಿತರರು ಇದ್ದರು.