ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ʼಬೇಟಿ ಬಚಾವೋʼ ಎಂದು ಘೋಷಣೆ ಬದಲಿಸಬೇಕಿದೆ : ಸುರ್ಜೇವಾಲ

Update: 2024-04-28 17:12 GMT

ಕಲಬುರಗಿ: 'ಬೇಟಿ ಬಚಾವೋ ಬೇಟಿ ಪಡಾವೋ' ಎನ್ನುವುದು ಮೋದಿ ಅವರ ಘೋಷಣೆಯಾಗಿತ್ತು. ಆದರೆ, ಈಗ ಅದೇ ಘೋಷಣೆಯನ್ನು "ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಬೇಟಿ ಬಚಾವೋ" ಎಂದು ಬದಲಿಸಬೇಕಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದರು.

ನಗರದ ಕೆಬಿಎನ್ ಆಡಿಟೋರಿಯಂನಲ್ಲಿ ನಡೆದ ಪ್ರಗತಿಪರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಮಹಿಳೆಯರ ಕುರಿತ ಮೋದಿ ಅವರ ಘೋಷಣೆಯನ್ನು ಈಗ " ಬಿಜೆಪಿ ಔರ್ ಜೆಡಿಎಸ್ ಸೇ ಬೇಟಿ‌ ಬಚಾವೊ" ಎಂದು ಬದಲಾಯಿಸಬೇಕಿದೆ ಎಂದರು.

ಹತ್ತು ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿದ ಸುರ್ಜೇವಾಲ ಅವರು ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ತಾವು ಅಡುವ ಮಾತಿನಂತೆ ನಡೆದುಕೊಳ್ಳಬೇಕು ಅಂದಾಗ ಮಾತ್ರ ಅವರ ನಾಲಿಗೆಗೆ ಹಾಗೂ ಮಾತುಗಳಿಗೆ ಬೆಲೆ ಇರುತ್ತದೆ. 2014 ರಲ್ಲಿ ಮಹಾನುಭಾವರೊಬ್ಬರು ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದರು. ಭಾರತೀಯರಿಗೆ ತಲಾ 15 ಲಕ್ಷ ರೂ. ಹಂಚುವುದಾಗಿ ಹೇಳಿದ್ದರು. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈ ಯಾವ ಭರವಸೆಗಳನ್ನೂ ಹತ್ತು ವರ್ಷಗಳ ಅವಧಿಯಲ್ಲಿ ಈಡೇರಿಸಲಿಲ್ಲ. ಹೀಗಿದಾರೆ ಅವರ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಬೆಲೆ ಸಿಗುವುದಿಲ್ಲ ಎಂದರು.

"ಮೋದಿ ಅವರಿಗೆ ಮಾತನಾಡಲು ಯಾವುದೇ ವಿಷಯಗಳು‌ ಇಲ್ಲದಿರುವಾಗ ಕಾಂಗ್ರೆಸ್ ಪಕ್ಷವನ್ನು, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಟು‌ ಶಬ್ದಗಳಿಂದ ಟೀಕಿಸುತ್ತಾರೆ. ಚುನಾವಣೆ ಈ ಸಂದರ್ಭದಲ್ಲಿ ಧರ್ಮಗಳ ಆಧಾರದ ಮೇಲೆ ಮಾತುಗಳನ್ನಾಡುತ್ತಿದ್ದಾರೆ" ಎಂದು ಹೇಳಿದರು.

ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಜನಪರ ಆಡಳಿತ‌ ನೀಡಲು ಸಹಕರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ‌ಖರ್ಗೆ, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಫರಾಜ್ ಉಲ್ ಇಸ್ಲಾಂ, ಜಗದೇವ್ ಗುತ್ತೇದಾರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News