ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಖಚಿತ : ಸಚಿವ ಝಮೀರ್‌ ಅಹ್ಮದ್‌ ವಿಶ್ವಾಸ

Update: 2024-11-03 12:12 GMT

ಝಮೀರ್ ಅಹ್ಮದ್ ಖಾನ್

ಕಲಬುರಗಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಖಚಿತ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ. ಅಲ್ಲಿ ನಮಗೆ ಗೆಲ್ಲಲು ಬಹಳಷ್ಟು ಅವಕಾಶಗಳಿವೆ. ಅಷ್ಟೇ ಅಲ್ಲ, ನಾವು ಚನ್ನಪಟ್ಟಣದಲ್ಲಿ 25ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಜನರೇ ಸೋಲಿಸುತ್ತಾರೆʼ ಎಂದು ಹೇಳಿದರು.

ʼಕುಮಾರಸ್ವಾಮಿ ಮತದಾರರ ಅಭಿಪ್ರಾಯ ಕೇಳದೆ ಸಂಸತ್ತಿಗೆ ಹೋಗಿದ್ದಾರೆ. ಹಾಗಾಗಿ, ಚನ್ನಪಟ್ಟಣದ ಜನರು ಈಗ ಬದಲಾವಣೆ ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಿ.ಪಿ.ಯೋಗೇಶ್ವರ್ ಆ ತಾಲೂಕಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆʼ ಎಂದರು.

ಉಪಚುನಾವಣೆ ನಡೆಯಲಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಅಸಮಾಧಾನಗಳು ಇಲ್ಲ. ಅಜ್ಜಂಪೀರ್‌ ಖಾದ್ರಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಖಾದ್ರಿ ಸಹಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

5 ವರ್ಷ ಪೂರ್ಣಗೊಳಿಸುತ್ತೇವೆ :

ʼಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೊದಲಿನಿಂದಲೂ ರಾಜ್ಯದ ಕಾಂಗ್ರೆಸ್ ಸರಕಾರ ಆಗ ಬೀಳುತ್ತೇ, ಈಗ ಬೀಳುತ್ತೆ ಎನ್ನುತ್ತಲೇ ಬರುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಿದರೂ ನಾವು ಐದು ವರ್ಷ ಪೂರ್ಣಗೊಳಿಸುತ್ತೇವೆʼ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News