ಸಿಂಗಲ್ಸ್ ಸೆಮೀಸ್ ನಲ್ಲಿ ಭಾರತೀಯ ಜಾವಿಯಾಗೆ ನಿರಾಶೆ ; ರಷ್ಯಾ ಜೋಡಿಗೆ ಡಬಲ್ಸ್ ಚಾಂಪಿಯನ್ಸ್ ಪಟ್ಟ
ಕಲಬುರಗಿ : ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಸೆಮಿಫೈನಲ್, ಡಬಲ್ಸ್ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದ ಭಾರತೀಯ ಆಟಗಾರರಿಗೆ ನಿರಾಶೆಯಾಗಿದೆ.
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ದೇವ್ ಜಾವಿಯಾ ಅವರು ಉಜ್ಬೇಕಿಸ್ಥಾನದ ಖುಮೊಯುನ್ ಸುಲ್ತಾನೋವ್ ಎದುರು ನಿರಾಶಾದಾಯಕ ಸೋಲನ್ನೊಪ್ಪಿಕೊಂಡರು.
ಮೊದಲ ಸೆಟ್ ನಲ್ಲೆ ಭಾರೀ ಪೈಪೋಟಿಯಿಂದ ಆಟವಾಡುತ್ತಿದ್ದ 22 ವರ್ಷದ ದೇವ್ ಜಾವಿಯಾ ಅವರು ಕೊನೆಯಲ್ಲಿ ಸುಲ್ತಾನೋವ್ ವಿರುದ್ಧ 7-6, (7-5), 6-2 ಅಂತರದಲ್ಲಿ ಪರಾಭವಗೊಂಡರು. ಸೆಮೀಸ್ ಗೆದ್ದ ಸುಲ್ತಾನೋವ್, ಇಂದು ಡಬಲ್ಸ್ ನಲ್ಲಿ ಚಾಪಿಯನ್ ಪಟ್ಟ ಅಲಂಕರಿಸಿದ ರಷ್ಯಾದ ಬೊಗ್ಡಾನ್ ಬೊಬ್ರೋವ್ ಅವರೊಂದಿಗೆ ನಾಳೆ (ರವಿವಾರ)ಫೈನಲ್ ಆಡಲಿದ್ದಾರೆ. ಇನ್ನೊಂದು ಸೆಮಿಫೈನಲ್ ಕದನದಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೋವ್ ಅಮೆರಿಕದ ನಿಕ್ ಚಾಪೆಲ್ ವಿರುದ್ಧ 6-3, 6-0 ಅಂತರದಲ್ಲಿ ನೇರ ಸೆಟ್ ಗೆದ್ದು ಬೀಗಿದರು.
ಡಬಲ್ಸ್ ನಲ್ಲಿ ರಷ್ಯಾ ಜೋಡಿಗೆ ಚಾಂಪಿಯನ್ ಪಟ್ಟ :
ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರಷ್ಯಾ ಜೋಡಿಯಾಗಿರುವ ಎಗೋರ್ ಆಗಾಪೋನೊವ್ ಮತ್ತು ಬೊಬ್ರೊವ್ ಜೋಡಿಯು ಅಮೆರಿಕದ ನಿಕ್ ಚಾಪೆಲ್ ಮತ್ತು ಭಾರತದ ನಿತಿನ್ ಕುಮಾರ್ ಸಿನ್ಹಾ ಜೋಡಿಯನ್ನು 7-5, 6-2 ಅಂತರದಲ್ಲಿ ಸೋಲುಣಿಸಿದರು. ಈ ಮೂಲಕ ಐಟಿಎಫ್ ಕಲಬುರಗಿ ಪುರುಷರ ಓಪನ್ ಟೆನಿಸ್ ಪಂದ್ಯವಾಳಿಯ ಡಬಲ್ಸ್ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಟೂರ್ನಿಯ ಡಬಲ್ಸ್ ಚಾಂಪಿಯನ್ನರಿಗೆ 1,550 ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿ ಹಾಗು ರನ್ನರ್ ಅಪ್ ಗಳಿಗೆ 900 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಪ್ರದಾನ ಮಾಡಲಾಯಿತು. ವಿಶೇಷ ಕೇಶ ವಿನ್ಯಾಸ ಹೊಂದಿರುವ ಬೊಬ್ರೋವ್ ಸರಣಿಯಲ್ಲಿ ನಾಲ್ಕನೇ ಡಬಲ್ಸ್ ಪ್ರಶಸ್ತಿ ಪಡೆದುಕೊಂಡು ಭಾರತದ ನೆಲದಲ್ಲೇ ಎರಡನೇ ಪ್ರಶಸ್ತಿ ಗೆದ್ದು ಬೀಗಿದರು. ಎಗೋರ್ ಆಗಾಫೋನೋವ್ ಭುವನೇಶ್ವರದಲ್ಲಿ ನಡೆದಿದ್ದ ಪಂದ್ಯದಲ್ಲಿ ಪ್ರಶಸ್ತಿ ಗೆದ್ದಿದ್ದರು.
ಸಿಂಗಲ್ಸ್ ( ಸೆಮಿಫೈನಲ್) :
ಉಜ್ಬೇಕಿಸ್ಥಾನದ ಖುಮೊಯುನ್ ಸುಲ್ತಾನೊವ್ ಭಾರತೀಯ ದೇವ್ ಜಾವಿಯಾ ವಿರುದ್ಧ 7-6 (7-5), 6-2 ಅಂತರದ ಗೆಲುವು ಸಾಧಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೊವ್ ಎದುರಾಳಿ ಅಮೆರಿಕದ ನಿಕ್ ಚಾಪೆಲ್ ವಿರುದ್ಧ 6-3, 6-0 ಅಂತರದಲ್ಲಿ ಗೆದ್ದು ಬೀಗಿದರು.
ಡಬಲ್ಸ್ ಫೈನಲ್ :
ಎಗೋರ್ ಆಗಾಫೋನೋವ್ ಮತ್ತು ಬೊಗ್ಡಾನ್ ಬೊಬ್ರೊವ್ ಜೋಡಿ ಅಮೆರಿಕದ ನಿಕ್ ಚಾಪೆಲ್ ಹಾಗೂ ನಿತಿನ್ ಕುಮಾರ್ ಸಿನ್ಹಾ ಜೋಡಿಯನ್ನು 7-5, 6-2 ಅಂತರದಲ್ಲಿ ಮಣಿಸಿದರು.