ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ನ. 26ರಂದು ರೈತ, ಕಾರ್ಮಿಕರ ಪ್ರತಿಭಟನೆ
ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನವೆಂಬರ್ 26ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಕಾರ್ಮಿಕರು ಎಚ್ಚರಿಕಾ ರ್ಯಾಲಿ ಪ್ರತಿಭಟನೆಯನ್ನು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪೆನಿಗಳ ಜೊತೆ ಕೈ ಮಿಲಾಯಿಸಿ ದುಡಿಯುವವರ ಹಕ್ಕನ್ನು ಕಸಿದುಕೊಂಡಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಸಹ ಮೊದಲು ಕೇಂದ್ರದ ನೀತಿಯನ್ನು ವಿರೋಧಿಸುವುದಾಗಿ ಬಾಯಿ ಮಾತಿನಲ್ಲಿ ಹೇಳಿ, ಅದೇ ರೀತಿ ತೀರ್ಮಾನಗಳನ್ನು ಮುಂದುವರೆಸಿಕೊಂಡು ಹೋಗಿದೆ. ನಮ್ಮ ಬದುಕಿನ ಮೇಲೆ ಕಾರ್ಪೋರೇಟ್ ಶಕ್ತಿಗಳ ಅಕ್ರಮವನ್ನು ತಡೆಯದಿದ್ದರೆ ಸಂಕಷ್ಟಗಳಿಂದ ವಿಮೋಚನೆಯಿಲ್ಲ ಎಂದರು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ರೈತರ ಬೆಳೆಗಳಿಗೆ ಇಲ್ಲಿಯವರೆಗೂ ಯೋಗ್ಯ ಬೆಲೆ ದೊರೆಯದೇ ಇದ್ದುದರಿಂದ ರೈತರು ಸಾಲಗಾರರಾಗಿದ್ದಾರೆ ಹಾಗೂ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಕೂಡಲೇ ರೈತರ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿದ ಅವರು, ರೈತ ಮಹಿಳೆಯರು ಮೈಕ್ರೋ ಫೈನಾನ್ಸ್‍ಗಳ ಮೂಲಕ ಮಾಡಿರುವ ಸಾಲ ಮನ್ನಾ ಸಹ ಮಾಡಬೇಕು ಎಂದು ಆಗ್ರಹಿಸಿದರು.
ವಿದ್ಯುಚ್ಛಕ್ತಿಯ ಖಾಸಗೀಕರಣ ಕೈಬಿಡುವಂತೆ, ರೈತರ ಪಂಪ್ ಸೆಟ್ಟುಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ರದ್ದುಪಡಿಸುವಂತೆ, ಬಗರ್ ಹುಕುಂ ರೈತರ ಹಾಗೂ ಸರ್ಕಾರಿ ಜಾಗೆಗಳಲ್ಲಿ ಮನೆ ಕಟ್ಟಿಕೊಂಡಿರುವ ಲಕ್ಷಾಂತರ ಬಡವರ ಜಮೀನು ಮತ್ತು ಜಾಗಗಳನ್ನು ಸತಾಯಿಸದೇ ಸಕ್ರಮಗೊಳಿಸುವಂತೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಗೆ ಹಾಗೂ ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಗಳನ್ನು ಕೈಬಿಡುವಂತೆ, ಬಲವಂತದ ಭೂ ಸ್ವಾಧೀನ ಹಾಗೂ ಒತ್ತುವರಿ ತೆರವನ್ನು ರದ್ದುಪಡಿಸುವಂತೆ, ನರೇಗಾ ಯೋಜನೆಯನ್ನು 200 ದಿನಗಳಿಗೂ ಹಾಗೂ 600ರೂ.ಗಳ ಕೂಲಿಗೂ ಹೆಚ್ಚಿಸುವಂತೆ, ರೈತರ ಕೊರಳಿಗೆ ಉರುಳಾಗಿರುವ ಜಾನುವಾರು ಕಾಯ್ದೆಯನ್ನು ರದ್ದು ಮಾಡುವಂತೆ, ಕೃಷಿಯಲ್ಲಿ ಕುಲಾಂತರಿ ತಳಿಯ ಬಳಕೆಯನ್ನು ನಿಷೇಧಿಸುವಂತೆ ಅವರು ಆಗ್ರಹಿಸಿದರು.
ಕಾರ್ಮಿಕರಿಗೆ ಇದುವರೆಗೆ ಸಿಕ್ಕಿದ್ದ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ನಾಲ್ಕು ಕೋಡ್‍ಗಳನ್ನು ರದ್ದುಗೊಳಿಸುವಂತೆ, ಅಸಂಘಟಿತ, ಸ್ಕೀಂ, ಗಿಗ್, ದಿನಗೂಲಿ ಕಾರ್ಮಿಕರ ಉದ್ಯೋಗ ಭದ್ರತೆಗೆ ಮತ್ತು ಬದುಕಿನ ರಕ್ಷಣೆಗೆ ಸೂಕ್ತ ನೀತಿ ರೂಪಿಸುವಂತೆ, ಫಲಾನುಭವಿ ವರ್ಗಕ್ಕೆ ಸೆಸ್ ಹಾಕುವ ಮೂಲಕ ಕಟ್ಟಡ ಕಾರ್ಮಿಕರಂತೆಯೇ ಆಯಾ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸುವಂತೆ, ಸಾರ್ವಜನಿಕ ಉದ್ದಿಮೆಗಳ, ಸರ್ಕಾರಿ ಸ್ಕೀಂಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಖಾಸಗೀಕರಣವನ್ನು ನಿಲ್ಲಿಸುವಂತೆ, ಎಲ್ಲರಿಗೂ ತಿಂಗಳಿಗೆ ಕನಿಷ್ಠ 27000ರೂ.ಗಳ ಮಾಸಿಕ ವೇತನ ನಿಗದಿಪಡಿಸುವಂತೆ, ಎಲ್ಲ ಅಸಂಘಟಿತ ಕಾರ್ಮಿಕರಿಗೆ ಮನೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ನೆರವು ನಿಧಿ ನೀಡುವಂತೆ, ದುಡಿಮೆಯ ಅವಧಿಯನ್ನು 8 ಗಂಟೆಯಿಂದ 18 ಗಂಟೆಗೆ ಹೆಚ್ಚಿಸಿರುವ ಕಾರ್ಮಿಕ ವಿರೋಧಿ ನೀತಿಯನ್ನು ಕೂಡಲೇ ಹಿಂಪಡೆಯುವಂತೆ ಅವರು ಒತ್ತಾಯಿಸಿದರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳಾ ಸಮುದಾಯಗಳಿಗೆ ಅವಕಾಶಗಳಲ್ಲಿ ಹಾಗೂ ಅಧಿಕಾರದಲ್ಲಿ ನ್ಯಾಯಯುತ ಪಾಲು ದೊರೆಯುವಂತೆ, ಮೀಸಲಾತಿ ವಿವಾದಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸುವಂತೆ, ದಮನಿತ ಸಮುದಾಯಗಳಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ಕೂಡಲೇ ನಿಲ್ಲಿಸುವಂತೆ, ದಮನಿತ ಸಮುದಾಯಗಳಿಗೆ ಸೇರಿದ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಸೇರಿದ ಭೂಮಿಗಳನ್ನು ರಕ್ಷಿಸಲು ಮುಂದಾಗುವಂತೆ, ಜಾತಿ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಶಕ್ತಿಗಳ ಕುರಿತು ಮೃದು ಧೋರಣೆ ತಾಳದೇ ಕಠಿಣ ಕ್ರಮ ಕೈಗೊಳ್ಳುವಂತೆ, ಮಹಿಳೆ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯಗಳಿಗೆ ರಕ್ಷಣೆಗೆ ಹಾಗೂ ಸಬಲೀಕರಣಕ್ಕೆ ಸಮಗ್ರ ಕಾರ್ಯ ಯೋಜನೆಯನ್ನು ರೂಪಿಸುವಂತೆ ಅವರು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಎಚ್ಚರಿಕಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಭೀಮಾಶಂಕರ್ ಮಾಡಿಯಾಳ್, ಮಹೇಶ್ ಎಸ್.ಬಿ., ಎಸ್.ಆರ್. ಕೊಲ್ಲೂರ್, ಪ್ರಭುದೇವ್ ಯಳಸಂಗಿ, ಎಸ್.ಎಂ. ಶಮಾ, ಎಂ.ಬಿ. ಸಜ್ಜನ್, ನಾಗೇಂದ್ರಪ್ಪಾ ಥಂಬೆ, ಮೌಲಾ ಮುಲ್ಲಾ, ಅರ್ಜುನ್ ಗೊಬ್ಬೂರ್, ಅಶೋಕ್ ಘೂಳಿ, ನಾಗಯ್ಯಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.