ಕಲಬುರಗಿ | ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಡಿ.17, 18ರಂದು ಅಂಗನವಾಡಿ ಕಾರ್ಯಕರ್ತೆಯರ ಧರಣಿ

Update: 2024-12-14 16:49 GMT

ಕಲಬುರಗಿ : ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇದೇ ಡಿ.17 ಮತ್ತು 18ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಿಐಟಿಯು ಜಲ್ಲಾ ಸಮಿತಿ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ಹೇಳಿದರು.

ನಗರದಲ್ಲಿ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್ ಅವರೊಂದಿಗೆ ಜಂಟಿಯಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು, ಐಸಿಡಿ 2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿ ಮತ್ತು ಎಲ್ಲರಿಗೂ ಅನ್ವಯಿಸಿಸಬೇಕು. 2018 ರಿಂದ ಕೇಂದ್ರ ಸರಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ. ಕೂಡಲೇ 26 ಸಾವಿರ ಗೌರವಧನ ಹೆಚ್ಚಿಸಬೇಕು, 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 15 ಸಾವಿರ ರೂ.ಗಳಿಗೆ ಗೌರವಧನ ಹೆಚ್ಚಿಸಬೇಕು, ನಿವೃತ್ತಿಯಾದವರಿಗೆ ಇಡಿಗಂಟು ಅಥವಾ ಎನ್‌ಪಿಎಸ್ ಹಣವನ್ನು ಹಾಗೂ 10 ಸಾವಿರ ಮಾಸಿಕ ಪಿಂಚಣಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ-ಯುಕೆಜಿ ನಿಲ್ಲಿಸಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು. ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಬೇಕು, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ ಉಪಚುನಾವಣೆಗಳಲ್ಲಿ ಮತದಾರರನ್ನು ಗುರುತಿಸುವುದು, ಅನರ್ಹಗೊಳಿಸುವುದು, ಚುನಾವಣಾ ಸಂದರ್ಭದಲ್ಲಿ ಚೀಟಿ ಹಂಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳಲ್ಲಿ ಅಂಗನವಾಡಿ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು, ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿಯಾಗಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಸಜ್ಜನ್, ರಾಜಮತಿ, ಶೇಖಮ್ಮ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News