ಕಲಬುರಗಿ | ಮಹಾಬೋಧಿ ಮಹಾ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ದಕ್ಕಬೇಕು : ಭಂತೆ ಡಾ.ಧಮ್ಮಾನಂದ ಮಹಾಥೇರಾ

ಕಲಬುರಗಿ : ಮಹಾಬೋಧಿ ದೇವಾಲಯದ ಪೂರ್ಣ ಆಡಳಿತ ಬೌದ್ಧರಿಗೆ ಸಿಗಲು ಬೋಧಗಯಾ ದೇವಾಲಯ ಕಾಯ್ದೆ 1949 ಅನ್ನು ರದ್ದುಗೊಳಿಸಿ ಅವರ ಪೂರ್ಣ ಅಧಿಕಾರ ಬೌದ್ಧರಿಗೆ ನೀಡಬೇಕು ಎಂದು ಭಂತೆ ಡಾ.ಧಮ್ಮಾನಂದ ಮಹಾಥೇರಾ ಆಗ್ರಹಿಸಿದರು.
ವಾಡಿ ಪಟ್ಟಣದ ಬೌದ್ಧ ಸಮಾಜದ ವತಿಯಿಂದ ಬುದ್ದಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ ಮಹಾಬೋಧಿ ಮಹಾ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ವಹಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟ ರ್ಯಾಲಿ ಉದ್ದೇಶಿಸಿ ಮಾತನಾಡಿದರು.
ಈ ಹೋರಾಟ ದೇಶಾದ್ಯಂತ ಹಬ್ಬಿ ಉಗ್ರರೂಪ ತಾಳುವ ಮೊದಲು ಕೇಂದ್ರದ ಒಕ್ಕೂಟ ಸರ್ಕಾರ ಹಾಗೂ ಬಿಹಾರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಬುದ್ಧಗಯಾದ ಮಹಾಬೋಧಿ ಮಹಾ ವಿಹಾರದ ಪೂರ್ಣ ಅಧಿಕಾರವನ್ನು ಬೌದ್ದರಿಗೆ ನೀಡಬೇಕು ಎಂದು ಎಚ್ಚರಿಸಿದರು.
ಪೂಜ್ಯ ಭಂತೆ ಡಾ.ಜ್ಞಾನ ಸಾಗರ ಥೇರಾ ಮಾತನಾಡಿ, ಸಂಘರ್ಷದಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ. ಹಾಗಾಗಿ, ಬುದ್ಧರಿಗೆ ಬೋಧಿ ಪ್ರಾಪ್ತಿಯಾದ ನಮ್ಮ ಪವಿತ್ರ ಸ್ಥಳವನ್ನು ಹೋರಾಟದ ಮೂಲಕವೇ ಪಡೆಯಬೇಕು. ಬಿಟಿ (ಬೋಧಗಯಾ ದೇವಾಲಯ) ಕಾಯ್ದೆ 1949 ರ ಪ್ರಕಾರ ಬಿಟಿಎಂಸಿ (ಬೋಧಗಯಾ ದೇವಾಲಯ ನಿರ್ವಹಣಾ ಸಮಿತಿ)ಯಲ್ಲಿ ಬಿಟಿಎಂಸಿಯ ಅಧ್ಯಕ್ಷರಾಗಿ ಗಯಾ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ 9 ಸದಸ್ಯರಿದ್ದಾರೆ. ಅದರಲ್ಲಿ 4 ಜನ ಹಿಂದೂ ಬ್ರಾಹ್ಮಣರು 4 ಸದಸ್ಯರು ಬೌದ್ಧರು. ಆದರೆ, ಕೆಲವು ವರ್ಷಗಳ ಹಿಂದೆ ಯಾರಾದರೂ ಅಧ್ಯಕ್ಷರಾಗಬಹುದು ಎಂದು ತಿದ್ದುಪಡಿ ಮಾಡಿದರೂ 1949 ರಿಂದ ಹಿಂದೂ ಬ್ರಾಹ್ಮಣರನ್ನು ಹೊರತುಪಡಿಸಿ ಬೌದ್ಧರು ಒಮ್ಮೆಯೂ ಅಧ್ಯಕ್ಷರಾಗಿಲ್ಲ. ಇದು ಬೌದ್ಧರಿಗೆ ಮಾಡಿದ ಅನ್ಯಾಯ ಜೊತೆಗೆ ಬಿ.ಟಿ ಕಾಯಿದೆ 1949 ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.
ಧಮ್ಮಾಚಾರಿ ಜಯದೇವ ಧಮಮಪಾಲ ಗುರೂಜಿ ಬೌದ್ಧ ಸಮಾಜ ಅಧ್ಯಕ್ಷ ಟೋಪಣ್ಣ ಕೋಮಟೆ, ಪದಾಧಿಕಾರಿಗಳಾದ ಸೂರ್ಯಕಾಂತ ರದ್ದೇವಾಡಿ, ಚಂದ್ರಸೇನ ಮೇನಗಾರ ಸೂರ್ಯಕಾಂತ ರದ್ದೇವಾಡಿ ಮಾತನಾಡಿದರು.
ಪೂಜ್ಯ ಭಿಕ್ಖುಣಿ ಅರ್ಚಸ್ಮತಿ ಮಾತಾಜಿ, ಪೂಜ್ಯ ಭಂತೆ ಶಾಂತಿಪಾಲ, ಬೌದ್ಧ ಸಮಾಜದ ಪದಾಧಿಕಾರಿಗಳಾದ ಸತೀಶ ಬಟ್ಟರ್ಕಿ, ಮಲ್ಲಿಕಾರ್ಜುನ ಕಟ್ಟಿ, ಮಲೇಶಿ ಚುಕ್ಕೇರ, ಮಲ್ಲಿಕಾರ್ಜುನ ತುನ್ನೂರ, ಮಲ್ಲೇಶ ನಾಟೇಕರ, ಶರಣು ನಾಟೇಕರ, ಖೇಮಲಿಂಗ ಬೆಳಮಗಿ, ವಿಜಯ ಸಿಂಗೆ, ಸಂದೀಪ ಕಟ್ಟಿ, ಬಾಬು ಕಾಂಬಳೆ, ದಿಲೀಪ ಮೈನಾಳಕರ, ಶೈಲೇಶ ಹೆರೂರ, ಭೀಮಶಾ ಮೈನಾಳ, ಮಹಾದೇವ ಮಾಲಗತ್ತಿ, ನಿಂಗಣ್ಣ ಶಾರದಳ್ಳಿ, ಗೌತಮ ಬೆಡೆಕರ, ಕಿಶೋರ ಸಿಂಗೆ, ಸಾಯಬಣ್ಣ ಲಾಡ್ಲಾಪುರ, ಸಂಜಯ ಗೋಪಾಳೆ, ಬಸವರಾಜ ಜೋಗೂರ, ತಿಪ್ಪಣ್ಣ ಚೇಗುಂಟಿ, ಪಾರ್ವತಿ ರದ್ದೇವಾಡಿ, ಭಾಗಮ್ಮ ತೆಲ್ಕೂರ, ಶಾಂತಾಬಾಯಿ ರಾವೂರ, ಸಕ್ಕುಬಾಯಿ ಗಾಯಕವಾಡ, ಮಾಪಮ್ಮ ಮಂದ್ರಾಡ, ಬಸಮ್ಮ ನಿಂಬರ್ಗಾ, ಅಂಬಿಕಾ ರದ್ದೇವಾಡಿ, ಶಕುಂತಲಾ ಕೊಲ್ಲೂರ ಬೇಬಿ ರಾಜನಾಳ, ಶೃತಿ ಜೋಗೂರ ಸೇರಿದಂತೆ ಇತರರಿದ್ದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ಹಾಗೂ ಪಿಎಸ್‍ಐ ತಿರುಮಲೇಶ ಕುಂಬಾರ ಅವರ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.