ಕಲಬುರಗಿ | ಸಾವಿರ ಜನರಿಗೆ ಉದ್ಯೋಗ ಖಾತ್ರಿ ಕೆಲಸ ನೀಡದ ಅಧಿಕಾರಿಗಳ ವಿರುದ್ಧ ಕ್ರಮ: ಸಿಇಓ ಭಂವರಸಿಂಗ್ ಮೀನಾ

ಕಲಬುರಗಿ : ಪ್ರತಿ ಗ್ರಾಪಂನಲ್ಲಿ ಪ್ರತಿದಿನ ಕನಿಷ್ಟ ಸಾವಿರ ಜನರಿಗೆ ಕೆಲಸಕೊಡಬೇಕು. ಹಿಂದೇಟು ಹಾಕುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಮೂಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಭಂವರಸಿಂಗ್ ಮೀನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬೇಸಿಗೆ ನೀರಿನ ಸಮಸ್ಯೆ ನಿರ್ವಹಣೆ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದ ಬಳಿಕ ಪಟ್ಟಣದ ತಾಪಂ ಕಚೇರಿಯಲ್ಲಿ ಕರೆದ ಗ್ರಾಪಂ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಪಂ ಇಓ ಮಾನಪ್ಪ ಕಟ್ಟಿಮನಿ ಅವರು ಗ್ರಾಪಂಗಳ ವರದಿ ಮಂಡಿಸಿ ಮಂಗಳವಾರ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ 16 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಒಟ್ಟು 25 ಸಾವಿರ ಕಾರ್ಮಿಕರಿಗೆ ಕೆಲಸ ನೀಡುವುದು, ಅಲ್ಲದೆ ಜೂನ್ 2ರವರೆಗೆ ಮಳೆ ಬರುವ ತನಕ ಕಾಮಗಾರಿ ನೀಡುವ ಗುರಿ ಹೊಂದಲಾಗಿದೆ ಎಂದು ಸಭೆಯಲ್ಲಿ ಸಿಇಓ ಅವರ ಗಮನಕ್ಕೆ ತಂದು, ಪ್ರತಿದಿನ 25 ಸಾವಿರ ಕೆಲಸ ಕೊಡುವ ಗುರಿಯನ್ನು ವಾರದಲ್ಲಿ ತಲುಪಲಾಗುವುದು ಎಂದು ಭರವಸೆ ನೀಡಿದರು.
ಬೇಸಿಗೆ ಮುಗಿಯುವತನ ಪ್ರತಿದಿನ ಪ್ರತಿ ಗ್ರಾಪಂನಲ್ಲಿ ಸಾವಿರ ಜನಕ್ಕೆ ಉದ್ಯೋಗ ಖಾತ್ರಿಯಡಿ ಕೆಲಸ ಕೊಡಲೇ ಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿದ್ದ ಪಿಡಿಓಗಳಿಗೆ ಅವರು ತಾಕೀತು ಮಾಡಿದರು.
ಜಿಪಂ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಂವರಸಿಂಗ್ ಮೀನಾ ಅವರು, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಗಮೇಶ ಬಿರಾದಾರ್ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರಾಮ ಪಂಚಾಯತಿಗಳ ಪಿಡಿಓ, ಮತ್ತು ಸಿಬ್ಬಂದಿ ಹಾಜರಿದ್ದರು.