ಕಲಬುರಗಿ | ಶಾಸಕ ಮತ್ತಿಮೂಡ್ ಗೆ ಅವಮಾನಿಸಿದ ಆರೋಪ ; ಹೆಚ್ಚುವರಿ ಎಸ್‍ಪಿ ವಿರುದ್ಧ ಹಕ್ಕುಚ್ಯುತಿ

Update: 2025-03-19 19:46 IST
ಕಲಬುರಗಿ | ಶಾಸಕ ಮತ್ತಿಮೂಡ್ ಗೆ ಅವಮಾನಿಸಿದ ಆರೋಪ ; ಹೆಚ್ಚುವರಿ ಎಸ್‍ಪಿ ವಿರುದ್ಧ ಹಕ್ಕುಚ್ಯುತಿ

ಎಎಸ್ಪಿ ಮಹೇಶ್ ಮೇಘನ್ನನವರ್,ಶಾಸಕ ಬಸವರಾಜ್ ಮತ್ತಿಮಡೂ

  • whatsapp icon

ಕಲಬುರಗಿ : ಶಾಸಕರನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಲಬುರ್ಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಹಕ್ಕುಬಾಧ್ಯತಾ ಸಮಿತಿಗೆ ಸ್ಪೀಕರ್ ಯು.ಟಿ.ಖಾದರ್ ಅವರು ಆದೇಶಿಸಿದ್ದಾರೆ.

ಅಧಿಕಾರಿಗಳಿಂದ ತಮ್ಮ ಹಕ್ಕುಗಳಿಗೆ ಚ್ಯುತಿ ಆಗುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕರೂ ಸೇರಿದಂತೆ ಕೆಲ ಶಾಸಕರು ಮಂಗಳವಾರ ವಿಧಾನಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಧಾನಸಭಾಧ್ಯಕ್ಷರು, ಹಕ್ಕುಬಾಧ್ಯತಾ ಸಮಿತಿಗೆ ಶಿಫಾರಸು ಮಾಡಿದರಲ್ಲದೇ, ಆದಷ್ಟು ಬೇಗ ವಿಚಾರಣೆ ಪೂರ್ಣಗೊಳಿಸಿ ವರದಿ ನೀಡುವಂತೆಯೂ ಸೂಚಿಸಿದ್ದಾರೆ.

ಎರಡೂ ದೂರುಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಿ.ಸಿ.ಪಾಟೀಲ್, ರಾಜೂ ಕಾಗೆ, ಬಸವರಾಜ್ ಮತ್ತೀಮುಡ್, ಸಚಿವ ಕೃಷ್ಣಬೈರೇಗೌಡ, ಅಧಿಕಾರಿಗಳಾದ ಕಟಾರಿಯಾ ಹಾಗೂ ಮಹೇಶ್ ಮೇಘನ್ನವರ್ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ, ಮಾತುಕತೆ ಮೂಲಕ ಬಗೆಹರಿಸೋಣ ಎಂದು ವಿಧಾನಸಭಾಧ್ಯಕ್ಷರಿಗೆ ಸಲಹೆ ನೀಡಿದರು. ಇದಕ್ಕೆ ತೀವ್ರ ಆಕ್ಷೇಪವೊಡ್ಡಿದ ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರು, ಸದನ ನಡೆಯುತ್ತಿರುವಾಗ ನಮಗೆ ಖಾಜಿ ನ್ಯಾಯ ಬೇಡ. ಇಂತಹ ಅಧಿಕಾರಿಗಳ ನಟ್-ಬೋಲ್ಟ್ ಟೈಟ್ ಮಾಡಿ ಎಂದು ಒತ್ತಾಯಿಸಿದ್ದಾರೆ.

ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷರು, ಶಾಸಕರಿಗೆ ವೇತನ, ಭತ್ತೆಗಳಿಗಿಂತ ಗೌರವ ಮುಖ್ಯ. ಯಾರೇ ಆಗಲಿ ಗೌರವ ಅಪೇಕ್ಷಿಸುತ್ತಾರೆ. ಐಎಎಸ್, ಐಪಿಎಸ್ ಓದಿದವರಿಗೆ ಮಾತನಾಡುವಾಗ ಸೌಜನ್ಯ ಇರಬೇಕು. ನಾನು ಇದನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತೇನೆ ಎನ್ನುತ್ತಿದ್ದಂತೆ ಸಚಿವ ಎಚ್.ಕೆ.ಪಾಟೀಲ್, ನೈಸರ್ಗಿಕ ನ್ಯಾಯಕ್ಕೆ ಅವಕಾಶ ಕೊಡೋಣ. ತಮ್ಮ ನಿರ್ಣಯ ಮರುಪರಿಶೀಲಿಸಿ ಎಂದು ಮತ್ತೂಮ್ಮೆ ಸಲಹೆ ನೀಡಿದರು. ಇದನ್ನು ತಳ್ಳಿಹಾಕಿದ ವಿಧಾನಸಭಾಧ್ಯಕ್ಷರು, ನನ್ನ ಆತ್ಮಸಾಕ್ಷಿ ಹೇಳಿದಂತೆ ಮಾಡುತ್ತೇನೆ. ಇಂತಹ ಅಧಿಕಾರಿಗಳಿಗೆ ನನ್ನ ಕಚೇರಿಯಲ್ಲಿ ಅವಕಾಶ ಇಲ್ಲ. ಆದಷ್ಟು ಬೇಗ ವಿಚಾರಣೆ ನಡೆಸಿ, ವರದಿ ಕೊಡಬೇಕು ಎಂದು ಹಕ್ಕುಬಾಧ್ಯತಾ ಸಮಿತಿಗೆ ಆದೇಶಿಸಿದರು. ವಿಧಾನಸಭಾಧ್ಯಕ್ಷರ ನಿರ್ಣಯವನ್ನು ಎಲ್ಲ ಶಾಸಕರೂ ಮೇಜು ಕುಟ್ಟಿ ಸ್ವಾಗತಿಸಿದರು.

ಇನ್ನು ಕಲಬುರಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ನನ್ನ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಆತನ ವಿರುದ್ಧ ಕ್ರಮ ಆಗಬೇಕು ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡೂ ಆಗ್ರಹಿಸಿದರು. ಈ ವೇಳೆ ಶಾಸಕ ರಾಜೂ ಕಾಗೆ ಮಧ್ಯಪ್ರವೇಶಿಸಿ, ಇಬ್ಬರೂ ಆಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ ಅಥವಾ ಹಕ್ಕುಬಾಧ್ಯತಾ ಸಮಿತಿ ಪರಿಶೀಲನೆ ನೀಡುವಂತೆ ಒತ್ತಾಯಿಸಿದರು.

ಅಧಿಕಾರಿಗಳಿಂದ ಆಡಳಿತ ಪಕ್ಷದವರಿಗೆ ಒಂದೇಟು ಬಿದ್ದರೆ, ವಿಪಕ್ಷದವರಿಗೆ ಎರಡು ಬೀಳುತ್ತಿದೆ. ಇದೇನು ಅಧಿಕಾರಿಗಳ ಸರ್ಕಾರನಾ? ಈ ಹಿಂದೆ ಸಚಿವ ಕೃಷ್ಣಬೈರೇಗೌಡರ ತಂದೆ ಬೈರೇಗೌಡರು ತಮ್ಮ ಕೈಯಲ್ಲಿದ್ದ ಊರಿಗೋಲಿನಿಂದಲೇ ತಪ್ಪಿತಸ್ಥ ಅಧಿಕಾರಿಗಳನ್ನು ಪ್ರವಾಸಿ ಮಂದಿರದಲ್ಲಿ ರಿಪೇರಿ ಮಾಡುತ್ತಿದ್ದರು. ಇಂದು ಶಾಸಕರಿಗೆ ಆದದ್ದು, ನಾಳೆ ಸ್ಪೀಕರಿಗೂ ಆಗಬಹುದು. ಅಧಿಕಾರಿಗಳೇ ಸರ್ಕಾರ ನಡೆಸುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News