ಕಲಬುರಗಿ | ಸಿಗರೇಟ್ ಪ್ಯಾಕೆಟ್ ಕದ್ದ ಆರೋಪ ; ಥಳಿಸಿ ದಲಿತ ಯುವಕನ ಹತ್ಯೆ
ಕಲಬುರಗಿ : ಸಿಗರೇಟ್ ಪ್ಯಾಕೆಟ್ ಕಳ್ಳತನ ಮಾಡಿದ ಆರೋಪದಲ್ಲಿ ಖಾಸಗಿ ಬ್ಲಡ್ ಬ್ಯಾಂಕ್ ಮಾಲಕನೊಬ್ಬ ತನ್ನ ಬಳಿ ಕೆಲಸಕ್ಕಿದ್ದ ದಲಿತ ಯುವಕನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಎಂ.ಬಿ.ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ನಗರದ ಪ್ರಗತಿ ಕಾಲೋನಿ ನಿವಾಸಿ ಶಶಿಕಾಂತ ಮಲ್ಲಿಕಾರ್ಜುನ ನಾಟೀಕಾರ (25) ಹತ್ಯೆಯಾದ ದಲಿತ ಯುವಕ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ದಲಿತ ಯುವಕ ಶಶಿಕಾಂತ್ ಅವರ ತಂದೆ ಮಲ್ಲಿಕಾರ್ಜುನ್ ರಾಣಪ್ಪ ನಾಟೀಕರ್ ಅವರು ದೂರು ನೀಡಿದ ಬೆನ್ನಲ್ಲೇ ಬ್ಲಡ್ ಬ್ಯಾಂಕ್ ಮಾಲಕ ಚಂದ್ರಶೇಖರ ಮಲ್ಲಿನಾಥ ಪಾಟೀಲ್, ಆದಿತ್ಯ ಅಲಿಯಾಸ್ ಆದೇಶ ಮರಾಠಾ, ಓಂ ಪ್ರಕಾಶ್ ಘೋರವಾಡಿ, ರಾಹುಲ್ ಪಾಟೀಲ್ ಹಾಗೂ ಅಷ್ಪಾಕ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
►ಪ್ರಕರಣದ ವಿವರ :
ಮೃತ ಶಶಿಕಾಂತ್, ಚಂದ್ರಶೇಖರ ಪಾಟೀಲ್ ಬಳಿ ಕೆಲಸ ಮಾಡುತ್ತಿದ್ದ ಬ್ಲಡ್ ಬ್ಯಾಂಕ್ ನಲ್ಲಿ 1.40 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್ ಕಳವಾಗಿತ್ತು. ತನ್ನ ಬಳಿ ಕೆಲಸಕ್ಕಿದ್ದ ಶಶಿಕಾಂತ್, ಆಕಾಶ್ ಸಿಗರೇಟ್ ಬಾಕ್ಸ್ ಕದ್ದಿದ್ದಾರೆ ಎಂದು ಆರೋಪಿಸಿ ಮಾಲಕ ಚಂದ್ರಶೇಖರ್ ಅಷ್ಟೂ ಹಣವನ್ನು ಕೊಡುವಂತೆ ಅವರನ್ನು ಕೂಡಿ ಹಾಕಿ ತನ್ನ ಸಹಚರರಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಶಶಿಕಾಂತ್ ಪೋಷಕರನ್ನು ಫೋನ್ ಮಾಡಿ ಕರೆಸಿ, ಜಾತಿ ನಿಂದನೆ ಮಾಡಿ ಬೆದರಿಸಿದ್ದಾನೆ. ಹಲ್ಲೆಗೊಳಗಾದ ತನ್ನ ಪುತ್ರ, ಶಶಿಕಾಂತ್ ನನ್ನು ಮಲ್ಲಿಕಾರ್ಜುನ ಅವರು ಮನೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಆತ ಕುಸಿದು ಬಿದ್ದ ಎನ್ನಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಶಶಿಕಾಂತ್ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮಲ್ಲಿಕಾರ್ಜುನ ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ನಗರ ಪೊಲೀಸರು, ಐವರು ಆರೋಪಿಗಳಲ್ಲಿ ಮೂರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.