ಕಲಬುರಗಿ | ಕುರುಬ ಸಮುದಾಯದವರಿಗೆ ಬಹಿಷ್ಕಾರ ಹಿನ್ನೆಲೆ: ಅಧಿಕಾರಿಗಳಿಂದ ಶಾಂತಿ ಸಭೆ

Update: 2025-03-19 19:34 IST
ಕಲಬುರಗಿ | ಕುರುಬ ಸಮುದಾಯದವರಿಗೆ ಬಹಿಷ್ಕಾರ ಹಿನ್ನೆಲೆ: ಅಧಿಕಾರಿಗಳಿಂದ ಶಾಂತಿ ಸಭೆ
  • whatsapp icon

ಕಲಬುರಗಿ : ಆಳಂದ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಕುರುಬ ಸಮುದಾಯದ ಜನರನ್ನು ಊರಿನಿಂದ ಬಹಿಷ್ಕಾರ ಹಾಕಲಾಗಿದೆ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಗ್ರಾಮದ ಚನ್ನವೀರ ಶಿವಾಚಾರ್ಯರ ಮಠದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ನಾಮಫಲಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಿದ್ದಕ್ಕೆ ಸ್ಥಳೀಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಜನರನ್ನು ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಘಟನೆಯ ವಿರುದ್ಧ ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟ(ರಿ) ಸಂಘಟನೆ ಕಿಡಿಕಾರಿದ್ದು, ಈ ಅನ್ಯಾಯದ ವಿರುದ್ಧ ಧರಣಿ ನಡೆಸಿತು. ಇದರ ಪರಿಣಾಮವಾಗಿ ತಾಲೂಕು ಆಡಳಿತವು ತಕ್ಷಣವೇ ದೌಡಾಯಿಸಿ, ಶಾಂತಿ ಸಭೆ ಕೈಗೊಂಡು ಪರಿಸ್ಥಿತಿ ಸಮನಗೊಳಿಸಲು ಪ್ರಯತ್ನಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತವು ಶಾಂತಿ ಸಭೆಯನ್ನು ಆಯೋಜಿಸಿತು. ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳು, ಡಿವೈಎಸ್ಪಿ, ಇಓ, ಸಮಾಜ ಕಲ್ಯಾಣ ಅಧಿಕಾರಿ, ಪಿಡಿಓ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದರು. ಈ ಸಭೆಯಲ್ಲಿ ಗ್ರಾಮಸ್ಥರು, ಕುರುಬ ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ಯುವಕರು ಹಾಜರಿದ್ದರು.

ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ ಅವರು ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಎಲ್ಲರೂ ಸಹೋದರತೆಯಿಂದ ಬಾಳಬೇಕು. ಕ್ಷುಲ್ಲಕ ಕಾರಣದಿಂದ ವೈಮನಸ್ಸು ಬೆಳೆಸಿಕೊಳ್ಳದೇ ಎಲ್ಲ ಮಹಾಪುರುಷರು ಎಲ್ಲ ಸಮುದಾಯಕ್ಕೆ ಬೇಕಾದವರಿದ್ದು, ಅವರ ಹೆಸರಿನಲ್ಲಿ ನಾವು ಭೇದ ಮಾಡಿಕೊಳ್ಳದೇ ಒಂದಾಗಿ ನಡೆಯಬೇಕು ಎಂದು ಹೇಳಿದರು.

ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಡಿವೈಎಸ್‍ಪಿ ಗೋಪಿ ಬಿ.ಆರ್. ಅವರು ಮಾತನಾಡಿ, "ಸಮಾಜದಲ್ಲಿ ಹಗೆತನ ಮತ್ತು ಜಾತಿ ಭೇದ ನಿವಾರಣೆಯಾಗಬೇಕು. ಎಲ್ಲರೂ ಸಹೋದರತ್ವದ ಮನೋಭಾವದಿಂದ ಬಾಳಬೇಕು. ಯಾವುದೇ ರೀತಿಯ ಅನ್ಯಾಯವನ್ನು ಕಾಯ್ದೆಗಳ ಮೂಲಕ ಪರಿಶೀಲಿಸಲಾಗುವುದು" ಎಂದರು.

ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟ(ರಿ) ಸಂಸ್ಥಾಪಕ ಅಧ್ಯಕ್ಷ ಅಂಬರೀಶ ಮಲ್ಲೇಶಿ ಮಾತನಾಡಿ, "ಈ ಘಟನೆ ಎಷ್ಟು ಖಂಡನೆಗೆ ಒಳಗಾಗಬೇಕೋ ಅಷ್ಟು ತೀವ್ರ ಅನ್ಯಾಯವಾಗಿದೆ. ನಮ್ಮ ಸಮುದಾಯದ ಜನರಿಗೆ ಊರಿನಿಂದ ಬಹಿಷ್ಕಾರ ಹಾಕಿರುವುದು ಖಂಡನೀಯ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಎಚ್ಚರಿಸಿದರು.

ಸಂಸ್ಥಾಪಕ ಕಾರ್ಯದರ್ಶಿ ಬಾಲಾಜಿ ಜಬಾಡೆ, ಸಕಲ ಸಂರಕ್ಷಣ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷ ಆಕಾಶ್ ದೇಗಾಂವ, ಗೊಂಡ ಕುರುಬ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ "ನಮ್ಮ ಸಮಾಜವನ್ನು ತಾರತಮ್ಯದಿಂದ ದೂರವಿಡುವ ಈ ರೀತಿಯ ನಡೆಗಳನ್ನು ತಕ್ಷಣವೇ ತಡೆಗಟ್ಟಬೇಕು. ನಮ್ಮ ಹಕ್ಕುಗಳಿಗೆ ಧಕ್ಕೆ ಬಾರದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಹೋಳ್ಕರ್, ಪಿಎಸ್‍ಐ ಭೀಮಾಶಂಕರ ಬಂಕ್ಲಿ, ಪಿಡಿಒ ಚಿದಾನಂದ ಅಲೇಗಾಂವ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News