ಕಲಬುರಗಿ | ಬಸವ ತತ್ವವು ಸಾರ್ವಕಾಲಿಕ ಸತ್ಯಗಳಾಗಿವೆ : ಡಾ.ಪ್ರತಿಮಾ ಕಾಮರೆಡ್ಡಿ

Update: 2025-04-29 20:48 IST
ಕಲಬುರಗಿ | ಬಸವ ತತ್ವವು ಸಾರ್ವಕಾಲಿಕ ಸತ್ಯಗಳಾಗಿವೆ : ಡಾ.ಪ್ರತಿಮಾ ಕಾಮರೆಡ್ಡಿ
  • whatsapp icon

ಕಲಬುರಗಿ : 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸಾರಿರುವ ಬಸವ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಡಾ.ಪ್ರತಿಮಾ ಎಸ್.ಕಾಮರೆಡ್ಡಿ ಹೇಳಿದರು.

ಬಸವ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಿ ವಚನ ಸಾಂಸ್ಕೃತಿಕ ಸಂಭ್ರಮದಲ್ಲಿ ಸಾಧಕ ಶರಣ ದಂಪತಿಗಳಿಗೆ ಬಸವ ಭೂಷಣ ಗೌರವ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರ ಪರ ಧ್ವನಿ ಎತ್ತಿ ಸಮಾನತೆಗಾಗಿ ಮುನ್ನುಡಿ ಬರೆದರು. ಅಸ್ಪೃಶ್ಯತೆ ತೊಲಗಿಸಿ ಸಹೋದರತ್ವ ಬೆಳೆಸಿದರು. ಮತ್ತು ವಚನ ಕ್ರಾಂತಿಯಿಂದ ಲಿಂಗ ತಾರತಮ್ಯ ಅಳಿಸಿ ಹೊಸ ಪರಂಪರೆ ಹುಟ್ಟು ಹಾಕಿದರು ಎಂದರು.

ಸಾನಿಧ್ಯ ವಹಿಸಿದ್ದ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು. ಇಷ್ಟಲಿಂಗದ ಮೂಲಕವೇ ಮಾನವ ಕಲ್ಯಾಣ ಬಯಸಿದವರಲ್ಲಿ ಬಸವಣ್ಣ ಪ್ರಮುಖರು. ಮೌಢ್ಯ ಧಿಕ್ಕರಿಸಿ ಜನ ಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದವರು. ಬಸವಾದಿ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬಸವ ಅಭಿಮಾನಿಗಳಾಗುವುದಕ್ಕಿಂತ, ಅವರ ಅನುಯಾಯಿಗಳಾಗಬೇಕು. ಆಗ ಮಾತ್ರ ಶರಣರು ಕಂಡ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಿಸಲು ಸಾಧ್ಯ ಎಂದು ಅವರು ಆಶಿರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶ್ವಗುರು ಬಸವಣ್ಣ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ವಚನಗಳನ್ನು ರಚಿಸಿ ಸುಂದರ ಸಮಾಜ ಕಟ್ಟಲು ಮುಂದಾಗಿದ್ದರು. ಬಸವ ತತ್ವ ಸಾರ್ವಕಾಲಿಕ ಸತ್ಯಗಳಾಗಿವೆ. ಬಸವಣ್ಣ ಯಾವುದೇ ಒಂದು ಸೀಮಿತ ವರ್ಗಕ್ಕೆ ಸೇರಿದವರಲ್ಲ. ಬದಲಾಗಿ ಸರ್ವ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಜಯಂತಿಯನ್ನು ವಿಭಿನ್ನವಾಗಿ ಆಚರಿಸುವ ಮೂಲಕ ತತ್ವಗಳನ್ನು ಪ್ರತಿಯೊಬ್ಬರ ಮನೆ-ಮನಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಬು ಮೌರ್ಯ, ಬಿಜೆಪಿ ಮುಖಂಡ ವಿನೋದ ಪಾಟೀಲ ಸರಡಗಿ, ಹೆಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಕಿರಣ ದೇಶಮುಖ, ಗುಲಬರ್ಗ ವಿ.ವಿ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ಶಾರದಾಮಣಿ ಪಾಟೀಲ, ಜ್ಯೋತಿ ಕೋಟನೂರ, ವನೀತಾ ಗುತ್ತೇದಾರ, ರವೀಂದ್ರಕುಮಾರ ಭಂಟನಳ್ಳಿ, ಡಾ.ರೆಹಮಾನ್ ಪಟೇಲ್ ಮಾತನಾಡಿದರು.

ಶರಣ ದಂಪತಿಗಳಾದ ಸಂಜೀವ ಗುಪ್ತಾ, ಶಶಿಕಾಂತ ಹೊಳಕರ್, ಬಸಲಿಂಗಪ್ಪ ಆಲ್ಹಾಳ, ಬಸವರಾಜ ಮೊರಬದ, ಡಾ.ಅರುಣಕುಮಾರ ಲಗಶೆಟ್ಟಿ, ಸೋಮು ಕುಂಬಾರ, ಶರಣು ಶೆಟ್ಟಿ, ಹಣಮಂತರಾವ ಪೆಂಚನಪಳ್ಳಿ, ಸಿದ್ಧರೂಢ ಮೂಲಗೆ ಅವರನ್ನು ಬಸವ ಭೂಷಣ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಜೀವನ ನೃತ್ಯಾನಿಕೇತನ ಸಂಸ್ಥೆಯ ಮಕ್ಕಳು, ಆವಂತಿಕಾ ಬಿ.ಘಂಟೆ, ಅಮೃತಪ್ಪ ಅಣೂರ ಕವಿಗಳು, ಬಾಬುರಾವ ಪಾಟೀಲ ಅವರ ಹಾಡುಗಳು, ಸಮೂಹ ನೃತ್ಯ ಪ್ರೇಕ್ಷಕರ ಗಮನ ಸೆಳೆದವು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News