ಕಲಬುರಗಿ | ಬಸವಣ್ಣರನ್ನು ಭಾರತದ ಅಧಿಕೃತ ನಾಯಕನೆಂದು ಘೋಷಣೆ ಮಾಡಲಿ : ಶರಣಬಸವ ದೇವರು

ಕಲಬುರಗಿ : ಬಸವಣ್ಣನವರನ್ನು ಇಂದು ನಾವು ಹೊತ್ತುಕೊಂಡು ಹೋಗಬೇಕಿದೆ. ಕರ್ನಾಟಕ ಸರ್ಕಾರ ಅಣ್ಣ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಬಸವಣ್ಣನವರು ಭಾರತದ ಅಧಿಕೃತ ನಾಯಕ, ವಿಶ್ವದ ನಾಯಕನೆಂದು ಘೋಷಣೆಮಾಡಲಿ ಎಂದು ಬೆಳಗಾವಿಯ ಹುಕ್ಕೇರಿಯ ಬೆಳವಿ ಬಸವ ಧರ್ಮ ಪ್ರಚಾರ ಸಂಸ್ಥೆಯ ವಿರಕ್ತಮಠದ ಶರಣಬಸವ ದೇವರು ಆಶಯ ವ್ಯಕ್ತಪಡಿಸಿದ್ದಾರೆ.
ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ 892ನೇ ಜಯಂತಿ ಪ್ರಯುಕ್ತ ಮಂಗಳವಾರ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವ ಜಯಂತ್ಯುತ್ಸವ ಸಮಿತಿ ಹಾಗೂ ಸಹಸ್ರಾರು ಬಸವಾಭಿಮಾನಿಗಳಿಂದ ಬೃಹತ್ ಬಹಿರಂಗ ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಕಾಯಕ, ದಾಸೋಹ ಪರಂಪರೆಗೆ ಮೂಲ ಸ್ಥಾಪಕ 12ನೇ ಶತಮಾನದ ಬಸವಣ್ಣನವರಾಗಿದ್ದಾರೆ. ಜಗತ್ತಿಗೆ ದಾಸೋಹ, ಕಾಯಕದ ಪರಿಚಯ ಮಾಡಿಸಿದ್ದು ಬಸವಣ್ಣನವರು. ಬಸವಣ್ಣ ಬಂದಮೇಲೆ ದಾಸೋಹದ ಪರಂಪರೆ ಮುನ್ನಲೇ ಬಂದಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವಾದಿ ಶರಣರ ವಚನಗಳಲ್ಲಿದೆ. ಶರಣರ ವಚನ ಉಳಿಸಿ ಬೆಳಸಿ. ಶರಣರಿಗಾಗಿ ದುಡಿಯಿರಿ, ಆಗತ್ಯವಿದ್ದಲ್ಲಿ ಮಡಿಯಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ವಚನ ಸಾಹಿತ್ಯ ಮೂಲಕ ಬಸವಾದಿ ಶರಣರು ಜಗತ್ತಿಗೆ ಬಸವತತ್ವದ ಪ್ರಚಾರ ಮಾಡಿದ್ದಾರೆ. ಆದರೆ, ಇಂದು ವಚನ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾವೆಲ್ಲರೂ ಬಸವಣ್ಣ ತತ್ವ-ಆದರ್ಶ ಅಳವಡಿಸಿಕೊಳ್ಳಬೇಕಿದೆ. ಅವರಿವರಿಂದ ಬದಲಾವಣೆ ನಿರೀಕ್ಷಿಸದೇ, ನಾವೇ ಪರಿವರ್ತನೆಗೆ ನಾಂದಿ ಹಾಡಬೇಕು ಎಂದು ಸಲಹೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಗಲಕೋಟೆಯ ಶಿರೂರಿನ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವಿರಕ್ತಮಠ ಯಡ್ರಾಮಿ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಮ್ಮುಖ ವಹಿಸಿದರು.
ಬಸವ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಎಂ.ವೈ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿಸಿದ್ದರಾಮಯ್ಯ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ 'ವೇದ, ಆಗಮನ, ಪುರಾಣ, ತರ್ಕವನ್ನು ಸಾರ ಸಗಟ್ಟವಾಗಿ ತಿರಸ್ಕರಿಸಿದವರು 12ನೇ ಬಸವಾದಿ ಶರಣರು. ಶರಣ ತತ್ವಗಳು ಎಂದಿದಿಗೂ ಪ್ರಸ್ತುತವಾಗಿದೆ. ಅವುಗಳನ್ನು ಬೆಳಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. ಚಿ.ದೊಡ್ಡಪ್ಪ ಅಪ್ಪ ವಚನ ಪಠಿಸುವುದರ ಮೂಲಕ ಬಸವಣ್ಣನವರ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ಶಾಸಕ ಬಸವರಾಜ್ ಮತ್ತಿಮಡು, ಎಂ.ಎಲ್.ಸಿ ಗಳಾದ ಶಶೀಲ್ ನಮೋಶಿ, ಬಿ.ಜಿ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ ಪಾಟೀಲ್, ಜಗದೇವ್ ಗುತ್ತೇದಾರ, ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಉತ್ಸವ ಸಮಿತಿ ಕಾರ್ಯದಕ್ಷ್ಯರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಚಂದು ಪಾಟೀಲ್, ಅಶೋಕ್ ಬಗಲಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶರಣಬಸಪ್ಪ ಪಪ್ಪಾ, ಭೀಮಾಶಂಕರ್ ಬಿಲಗುಂದಿ, ಅರುಣಕುಮಾರ್ ಪಾಟೀಲ್, ನೀಲಕಂಠರಾವ್ ಮೂಲಗೆ, ಸುರೇಶ್ ಸಜ್ಜನ, ಕಿರಣಕುಮಾರ್ ದೇಶಮುಖ, ಪ್ರವೀಣ ಪಾಟೀಲ್ ಹರವಾಳ್ ಸೇರಿ ಅನೇಕರು ಇದ್ದರು.
ಕಾರ್ಯಕ್ರಮವನ್ನು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಸಚಿವ ಶರಣಬಸವಪ್ಪಾ ದರ್ಶನಾಪುರ ಷಟಸ್ಥಲ ಧ್ವಜರೋಹಣ ನೆರವೇರಿಸಿದರು. ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಸವಾಭಿಮಾನಿಗಳು ಭಾಗವಹಿಸಿದ್ದರು.
