ಕಲಬುರಗಿ | ಎ.26ರಂದು ಶ್ರೀ ಶಿವಶರಣ ಹರಳಯ್ಯನವರ ಜಯಂತ್ಯೋತ್ಸವ : ರಾಮಚಂದ್ರ ಗೋಳಾ

ಕಲಬುರಗಿ : ಶ್ರೀ ಶಿವಶರಣ ಸಮಗಾರ ಹರಳಯ್ಯನವರ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾ ಹರಳಯ್ಯ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಎ.26 ರಂದು(ನಾಳೆ) ಸಂಜೆ 4 ಗಂಟೆಗೆ ಕಲಬುರಗಿ ನಗರದ ಬ್ರಹ್ಮಪೂರ ಪ್ರದೇಶದ ಹರಳಯ್ಯ ವೃತ್ತದಲ್ಲಿ ಶ್ರೀ ಶಿವಶರಣ ಸಮಗಾರ ಹರಳಯ್ಯನವರ 914ನೇ ಜಯಂತ್ಯೋತ್ಸವ ನಿಮಿತ್ಯ ಬಹಿರಂಗ ಸಭೆ ಆಯೋಜಿಸಿದೆ ಎಂದು ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಗೋಳಾ ತಿಳಿಸಿದರು.
ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣಿಕರ್ತರಾದ ಶರಣ ಹರಳಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ ಸಮಸ್ತ ಸಮಗಾರ ಬಂಧುಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಬಹಿರಂಗ ಸಭೆ ಮತ್ತು ಮೆರವಣಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ರಾಮಚಂದ್ರ ಗೋಳಾ ಅವರು ಮನವಿ ಮಾಡಿದರು.
ಕಲಬುರಗಿಯ ಮಕ್ತಂಪುರ ಗದ್ದಗಿ ಮಠದ ಚರಲಿಂಗಸ್ವಾಮಿ ಶ್ರೀಗಳು, ಶರಣಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಹಾವೇರಿಯ ಹರಳಯ್ಯ ಪೀಠದ ನಿಜಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಬಹಿರಂಗ ಸಭೆ ನಡೆಯಲಿದೆ ಎಂದರು.
ಬಹಿರಂಗ ಸಭೆಯನ್ನು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಮತ್ತು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ಉದ್ಘಾಟಿಸಲಿದ್ದು, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಝ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ.ನಮೋಶಿ, ಚಂದ್ರಶೇಖರ ಪಾಟೀಲ ಹುಮನಾಬಾದ, ಜಗದೇವಪ್ಪ ಗುತತೇದಾರ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣು ಮೋದಿ ಅವರುಗಳು ಆಗಮಿಸಲಿದ್ದಾರೆ.
ಮಹಾನಗರ ಪಾಲಿಕೆಯ ಸದಸ್ಯೆ ತೃಪ್ತಿ ಶ್ರೀಣಿವಾಸ ಲಾಖೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಬಿ.ಜೆ.ಪಿ. ಮುಖಂಡ ಶಿವಕಾಂತ ಮಹಾಜನ್, ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜದ ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ್ ಸೇರಿದಂತೆ ಸಮಾಜದ ಅನೇಕ ಉದ್ದಿಮೆದಾರರು, ಮುಖಂಡರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜಯಂತ್ಯೋತ್ಸವ ಅಂಗವಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಅಂದು ಬೆಳಿಗ್ಗೆ 11 ಗಂಟೆಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಶಾಸಕ ಬಸವರಾಜ ಮತಿಮೂಡ ಮತ್ತು ಮಹಾನಗರ ಪಾಲಿಕೆ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಲಾಲಗೇರಿ ಕ್ರಾಸ್-ಸೂಪರ್ ಮಾರ್ಕೆಟ್-ಜಗತ್ ವೃತ್ತ ಮಾರ್ಗವಾಗಿ ಗೋವಾ ಹೋಟೆಲ್ ಬಳಿ ಬಂದು ಮೆರವಣಿಗೆ ಸಂಪನ್ನವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಿವಶರಣ ಸಮಗಾರ ಹರಳಯ್ಯ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಭೀಮಳ್ಳಿ, ಪ್ರಧಾನ ಕಾರ್ಯದರ್ಶಿ ದೇವರಾಜ ಗೋಳಾ, ಉಪಾಧ್ಯಕ್ಷರಾದ ಶಿವರಾಯ ಕಟ್ಟಿಮನಿ, ಕಾಶಿನಾಥ ದಿವಂಟಗಿ, ಲಕ್ಷ್ಮೀಕಾಂತ ಇಳಕಲ್, ಸುಭಾಷ ಜಿ. ಕಣ್ಣೂರು ಹಾಗೂ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಚಂದ್ರಕಾಂತ ದೇಗಲಮಡಿ ಉಪಸ್ಥಿತರಿದ್ದರು.