ಕಲಬುರಗಿ | ಸಚಿವ ಝಮೀರ್ ಅಹ್ಮದ್ ರಾಜೀನಾಮೆಗೆ ಬಿಜೆಪಿ ಮುಖಂಡರ ಆಗ್ರಹ
ಕಲಬುರಗಿ : ರಾಜ್ಯಾದ್ಯಂತ ಓಡಾಡಿ ದೇವಸ್ಥಾನ, ದರ್ಗಾ, ಚರ್ಚ್‌ಗಳ ಆಸ್ತಿಗಳನ್ನು ವಕ್ಫ್‌ಗೆ ಬರೆಸಿಕೊಳ್ಳುವ ಮೂಲಕ ರಾಜ್ಯದ ಜನರ ಆಸ್ತಿಯನ್ನು ಲೂಟಿ ಮಾಡುತ್ತಿರುವ ಸಚಿವ ಝಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕೆಂದು ಸೇಡಂನ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʼವಕ್ಫ್ ಬೋರ್ಡ್‌ನಿಂದ ಸಮುದಾಯಕ್ಕೆ ಯಾವುದೇ ಲಾಭ ಸಿಗುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರಿಸಲಾಗಿರುವ ಕಾಂಗ್ರೆಸ್ ಹೇಳಿಕೆ ಸತ್ಯಕ್ಕೆ ದೂರ ಮತ್ತು ರಾಜಕೀಯ ಗಿಮಿಕ್, ಅಂತಹದ್ದೇನಾದರೂ ನಡೆದರೆ ಅದನ್ನು ನಾವು ಖಂಡಿಸುತ್ತೇವೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲʼ ಎಂದರು.
ʼಉಪ ಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಿಮಿಕ್ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಝಮೀರ್ ಅಹ್ಮದ್ ರಾಜೀನಾಮೆಗೆ ಒತ್ತಾಯಿಸಿ, ರಾಜ್ಯಾದ್ಯಂತ ನ.4ರಂದು ಏಕಕಾಲಕ್ಕೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ಉಮೇಶ್ ಜಾದವ್ ಮಾತನಾಡಿ, ʼದೇಶದಲ್ಲಿ ವಕ್ಫ್ ಕಾನೂನು ಜಾರಿಯಾಗಲು ವಿರೋಧಿಗಳು ತಡೆಯುತ್ತಿದ್ದಾರೆ. ಇದೆಲ್ಲ ವೋಟ್ ಬ್ಯಾಂಕ್ ರಾಜಕಾರಣ. ರೈತರು ಎಚ್ಚರ ವಹಿಸಬೇಕು. ರೈತರ ಸಮಸ್ಯೆಗಳಿಗೆ ನಮ್ಮ ಕಚೇರಿ ಕಿವಿಯಾಗುತ್ತದೆ, ಯಾವಾಗ ಬೇಕಾದರೂ ರೈತರಿಗೆ ಕಾನೂನು ಸಹಾಯ ಪಡೆದುಕೊಳ್ಳಬಹುದುʼ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ ಹಾದಿಮನಿ ಸೇರಿದಂತೆ ಇತರರು ಇದ್ದರು.